ಕಾರವಾರ/ಶಿರಸಿ:ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಕುಮಟಾ ಹಾಗೂ ಅಂಕೋಲಾದಲ್ಲಿ ಎರಡು ತೂಗು ಸೇತುವೆಗಳು ಕೊಚಿಹೋಗಿದ್ದು, ಶಿರಸಿ ತಾಲೂಕಿನ ಪೂರ್ವ ಭಾಗದ ಜೀವನದಿ ವರದೆ ಉಕ್ಕಿ 1500 ಕ್ಕೂ ಅಧಿಕ ಭತ್ತದ ಗದ್ದೆಗಳು ಜಲಾವೃತಗೊಂಡು, ಅಕ್ಕಪಕ್ಕದ ಗ್ರಾಮಗಳಿಗೆ ನೆರೆಯ ಭೀತಿ ಎದುರಾಗಿದೆ.
ಕಳೆದ ಒಂದುವಾರದಿಂದ ಮಳೆ ಎಡೆ ಬಿಡದೆ ಸುರಿಯುತ್ತಿರುವ ಕಾರಣ ಬಹುತೇಕ ನದಿಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಅಘನಾಶಿನಿ ನದಿಯಲ್ಲಿ ಇದೇ ಮೋದಲ ಬಾರಿಗೆ ನೀರು ಅತೀ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದೆ. ಸೋಪಿನ ಹೊಸಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಮನೆಯಿಂದ ಬಗಣೆ ಹಾಗೂ ಮೊರಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಳೆದ ನಾಲ್ಕೈದು ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಇದೀಗ ಸೇತುವೆ ಮೇಲೆ ನೀರು ಹರಿದಿದ್ದು, ನದಿಯಲ್ಲಿ ತೇಲಿ ಬಂದ ಬೃಹತ್ ಗಾತ್ರದ ದಿಮ್ಮಿಗಳು ಸಿಕ್ಕಿ ಸೇತುವೆ ತುಂಡಾಗಿ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದ ಗ್ರಾಮಕ್ಕೆ ಸಂಪರ್ಕವೇ ಇಲ್ಲದಂತಾಗಿದೆ.