ಶಿರಸಿ:ರಾಜ್ಯ ಸರ್ಕಾರ ಬಜೆಟ್ನಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಕುರಿತು ಪ್ರಸ್ತಾವನೆ ಸಲ್ಲಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ದೊಡ್ಡ ವಿರೊಧ ವ್ಯಕ್ತವಾಗಿದೆ. ಯೋಜನೆ ಕುರಿತು ಬೃಹತ್ ಸಮಾಲೋಚನಾ ಕಾರ್ಯಗಾರವನ್ನೂ ನಡೆಸಿದ್ದು, ಅಗತ್ಯ ಬಿದ್ದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಮುಂದಾಳತ್ವದಲ್ಲಿ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬೇಡ್ತಿ-ವರದಾ ನದಿಯ ನೀರು ಜೋಡಿಸಿ, ಇದರಲ್ಲಿ ಹರಿದು ಸಮುದ್ರಕ್ಕೆ ಸೇರುವ 22 ಟಿಎಂಸಿ ನೀರನ್ನು ಹಾವೇರಿ, ಗದಗ, ಕೊಪ್ಪಳ, ಸಿಂಧನೂರು, ರಾಯಚೂರು ಪ್ರದೇಶಗಳಿಗೆ ಕೊಂಡೊಯ್ಯುವ ಯೋಜನೆಯನ್ನು, ಈಗಿನ ಸರ್ಕಾರ ಬಜೆಟ್ನಲ್ಲಿ ಪ್ರಸ್ತಾಪಿಸಿದೆ. ವಿಸ್ತೃತ ಯೋಜನಾ ವರದಿ (ಎನ್.ಡಬ್ಯ್ಲೂ,ಡಿ.ಎ) ಸಿದ್ದಪಡಿಸಲು ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜನ್ಸಿಗೆ ಮನವಿ ಮಾಡುವುದಾಗಿ ಯಡಿಯೂರಪ್ಪನವರು ತಿಳಿಸಿದ್ದಾರೆ.
ಆದ್ರೆ ಈ ಯೋಜನೆ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ಜೀವ ಸಂಕುಲಗಳಿಗೆ ತೊಂದರೆಯಾಗುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜಲಮೂಲ ಕೊರತೆಯಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಇಂದು ಸೋಂದಾದ ಸ್ವರ್ಣವಲ್ಲೀ ಮಠದ ಗಂಗಾದರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾಧಕ ಭಾದಕದ ಕುರಿತು ಚರ್ಚೆ ನಡೆಸುವ ಜೊತೆಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರದಂತೆ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಯೋಜನೆ ಅನುಷ್ಠಾನವಾದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆದಿದೆ.