ಮರಾಠಿ ಸಿನಿಮಾ ಪ್ರದರ್ಶನಕ್ಕೆ ವಿರೋಧ: ಪ್ಲೆಕ್ಸ್ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಕರವೇ ಕಾರವಾರ: ಕನ್ನಡ ಹೊರತುಪಡಿಸಿ ಮರಾಠಿ ಭಾಷೆಯ ಚಿತ್ರ ಪ್ರದರ್ಶಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಕಾರವಾರದ ಅರ್ಜುನ್ ಥಿಯೇಟರ್ ಬಳಿ ಫ್ಲೆಕ್ಸ್ ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಅರ್ಜುನ್ ಥಿಯೇಟರ್ನಲ್ಲಿ 'ಧೋಂಡಿ ಚಂಪ್ಯಾ ಏಕ್ ಪ್ರೇಮ್ ಕಥಾ' ಎಂಬ ಮರಾಠಿ ಸಿನಿಮಾವನ್ನು ಶುಕ್ರವಾರದಿಂದ ಪ್ರದರ್ಶಿಸಲಾಗುತ್ತಿತ್ತು. ಅಲ್ಲದೇ ಈ ಸಿನಿಮಾಕ್ಕೆ ಸಂಬಂಧಿಸಿದ ಬೃಹತ್ ಫ್ಲೆಕ್ಸ್, ಪೋಸ್ಟರ್ ಗಳನ್ನು ಥಿಯೇಟರ್ ಮೇಲೆ ಅಳವಡಿಸಿ, ಕಾಂತಾರ ಸಿನಿಮಾದ ಪೋಸ್ಟರನ್ನ ಥಿಯೇಟರ್ ನ ಹೊರ ಭಾಗದಲ್ಲಿ ಕೆಳಕ್ಕೆ ಇಡಲಾಗಿತ್ತು.
ಇದರಿಂದಾಗಿ ಆಕ್ರೋಶಗೊಂಡ ಕರವೇ ಕಾರ್ಯಕರ್ತರು, ಥಿಯೇಟರ್ ಎದುರು ಜಮಾಯಿಸಿ ಥಿಯೇಟರ್ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾಕ್ಕೆ ಆದ್ಯತೆ ನೀಡದೆ ಮರಾಠಿ ಭಾಷೆ ಬೆಳೆಸುವ ಕೆಲಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಕಾರ್ಯಕರ್ತರ ಆಗ್ರಹದ ಬಳಿಕ ಥಿಯೇಟರ್ನ ಸಿಬ್ಬಂದಿ ಮರಾಠಿ ಸಿನಿಮಾದ ಪೋಸ್ಟರ್ ತೆರವುಗೊಳಿಸಿದ್ದಾರೆ. ಇನ್ನು, ಮರಾಠಿ ಸಿನಿಮಾ ಪ್ರದರ್ಶನ ಮಾಡದಂತೆಯೂ ಕರವೇ ಕಾರ್ಯಕರ್ತರು ಆಗ್ರಹಿಸಿದ್ದು, ಈ ಬಗ್ಗೆ ಥಿಯೇಟರ್ ಸಿಬ್ಬಂದಿ ಮಾಲೀಕರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಅಂಕೋಲಾದ ವರಿಲ್ ಬೇಣಕ್ಕಿಲ್ಲ ರಸ್ತೆ ಸಂಪರ್ಕ: ಜೋಳಿಗೆ ಮೂಲಕ ಆಸ್ಪತ್ರೆ ಸೇರಿದ ವೃದ್ಧ