ಕಾರವಾರ:ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರದೇಶಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡದೇ ನಿರ್ಲಕ್ಷಿಸಿದ್ದಾರೆ ಎಂಬ ಆರೋಪದ ನಡುವೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರವಾರಕ್ಕೆ ಭೇಟಿ ನೀಡಿದ್ದರು.
ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ನಡೆಸಿದ ಅವರು, ಮುನ್ಸೂಚನೆ ನೀಡದೇ ಜಲಾಶಯದಿಂದ ನೀರು ಬಿಟ್ಟ ಕೆಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಜು.23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ನೆರೆ ಸೃಷ್ಟಿಯಾಗಿ ಅವಾಂತರ ಉಂಟಾಗಿತ್ತು. ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಕಾರವಾರ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು.
ಅದರಲ್ಲಿಯೂ ಜಲಾಶಯದ ಸಮೀಪದಲ್ಲಿರುವ ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಗ್ರಾಮಗಳಲ್ಲಿ ಮನೆಗಲೂ ಪ್ರವಾಹದಿಂದ ಕೊಚ್ಚಿ ಹೋಗಿದ್ದವು. ಕಳೆದ ವಾರ ಜಿಲ್ಲೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿದ್ದು, ಕೇವಲ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿಗೆ ಮಾತ್ರ.
ಇಂದು ಕಾರವಾರ ತಾಲೂಕಿನ ಕದ್ರಾ ಜಲಾಶಯದ ಸುತ್ತಮುತ್ತಲಿನ ಗ್ರಾಮಕ್ಕೆ ವಿಪಕ್ಷ ನಾಯಕ ಭೇಟಿ ನೀಡಿದರು. ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಕುರಿತು ವೀಕ್ಷಣೆ ನಡೆಸಿದರು.
ಬಳಿಕ ಕೆಪಿಸಿ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ ಯಾವುದೇ ಮುನ್ಸೂಚನೆ ನೀಡದೇ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟು ಜನರನ್ನಿ ಸಮಸ್ಯೆಗೆ ಸಿಲುಕಿಸಿದ್ದೀರಾ? ಎಂದು ಗರಂ ಆದರು. ಅಲ್ಲದೇ ನಿರಾಶ್ರಿತರಾದವರಿಗೆ KPC ಕಾಲೋನಿಯಲ್ಲಿಯೇ ಉಳಿದುಕೊಳ್ಳಲು ಸೂರು ನೀಡುವಂತೆ ಸೂಚನೆ ನೀಡಿದರು.