ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೆ ಹಳಿಯಾಳ ಮೂಲದ ವ್ಯಕ್ತಿಯಲ್ಲಿ ಪತ್ತೆಯಾಗಿದ್ದ ಮೊದಲ ಬ್ಲ್ಯಾಕ್ ಫಂಗಸ್ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೋರ್ವರಲ್ಲಿ ಇದೇ ರೀತಿಯ ಲಕ್ಷಣ ಕಂಡು ಬಂದಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಕನ್ನಡದ ಮತ್ತೋರ್ವನಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣ ಪತ್ತೆ! - ಉತ್ತರ ಕನ್ನಡದ ಮತ್ತೋರ್ವನಲ್ಲಿ ಬ್ಲ್ಯಾಕ್ ಫಂಗಸ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸೋಂಕಿತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ಬ್ಲ್ಯಾಕ್ ಫಂಗಸ್ ಶಂಕೆ ಮೇಲೆ ಮಂಗಳೂರಿಗೆ ದಾಖಲಾಗಿರುವ ವ್ಯಕ್ತಿಗೆ 60 ವರ್ಷ ವಯಸ್ಸಾಗಿದ್ದು, ಕಾರವಾರದ ಸದಾಶಿವಗಡ ಮೂಲದವರಾಗಿದ್ದಾರೆ. ಕಿಡ್ನಿ, ಡಯಾಬಿಟಿಸ್, ನ್ಯುಮೋನಿಯಾ, ಹೈಪರ್ ಟೆನ್ಶನ್ಗಳಿಂದ ಬಳಲುತ್ತಿದ್ದ ಇವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್) ಕೋವಿಡ್ ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇವರಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯೇ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪವಿಭಾಗಾಧಿಕಾರಿ ವಿದ್ಯಾಶ್ರೀ, ಸೋಂಕಿತರ ಸ್ಕ್ಯಾನಿಂಗ್ ತಪಾಸಣೆಗಳು ನಡೆದಿವೆ. ಆದರೆ ವೈದ್ಯರು ಇದು ಬ್ಲ್ಯಾಕ್ ಫಂಗಸ್ ಪ್ರಕರಣವೇ ಎಂದು ಇನ್ನಷ್ಟೇ ಖಚಿತಪಡಿಸುವುದು ಬಾಕಿ ಇದೆ. ಸೋಂಕಿತ ಸದ್ಯ ಚಿಕಿತ್ಸೆಯಲ್ಲಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.