ಭಟ್ಕಳ:ನಿನ್ನೆ ರಾತ್ರಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 69 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ತಾಲೂಕಿನ ವ್ಯಾಪ್ತಿಯ ಸುಲ್ತಾನ್ ಸ್ಟ್ರೀಟ್ ನ 69 ವರ್ಷದ ವ್ಯಕ್ತಿಯು ಕಳೆದ 3-4 ದಿನದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ವ್ಯಕ್ತಿಯನ್ನು ಶನಿವಾರದಂದು ಮುರುಡೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದು, ವ್ಯಕ್ತಿಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆ ವೈದ್ಯರು ಔಷಧಿಯನ್ನು ನೀಡಿ ಕಳುಹಿಸಿದ್ದರು ಎನ್ನಲಾಗಿದೆ.
ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದು, ರಾತ್ರಿ 12 ಗಂಟೆಗೆ ವ್ಯಕ್ತಿಯ ಆರೋಗ್ಯ ಇನ್ನಷ್ಟು ಹದಗೆಟ್ಟ ಪರಿಣಾಮವಾಗಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಮೃತ ವ್ಯಕ್ತಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮಧ್ಯಾಹ್ನ ಬಂದ ವರದಿಯಲ್ಲಿ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಹಾಯಕ ಆಯುಕ್ತ ಭರತ್ ಎಸ್, ತಹಶೀಲ್ದಾರ್ ಎಸ್. ರವಿಚಂದ್ರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪುರಸಭೆಯ ಅಧಿಕಾರಿಗಳ ನೇತೃತ್ವದಲ್ಲಿ ಪಿಪಿಇ ಕಿಟ್ ಧರಿಸಿದ ಪೌರ ಕಾರ್ಮಿಕರು ಮೃತನ ಮನೆಯ ನಾಲ್ಕು ಮಂದಿಯ ಸಮ್ಮುಖದಲ್ಲಿ ಗೌಸಿಯಾ ಸ್ಟ್ರೀಟ್ ನಲ್ಲಿನ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಖಚಿತಪಡಿಸಿದ್ದಾರೆ.
ಸದ್ಯ ಮೃತನ ಮನೆ ಮಂದಿ, ಕುಟುಂಬಸ್ಥರು ಹಾಗೂ ಆತನ ಸಂಪರ್ಕದಲ್ಲಿರುವವರ ಮಾಹಿತಿ ಕಲೆ ಹಾಕಿ ಎಲ್ಲರ ಗಂಟಲು ದ್ರವ ಪರೀಕ್ಷೆ ಮಾಡಲು ತಾಲೂಕಾಡಳಿತ ಸಿದ್ದಮಾಡಿಕೊಂಡಿದೆ. ಇನ್ನೂ ಮೃತನ ಮನೆ ಮಂದಿ, ಮನೆಯಲ್ಲಿಯೇ ಕ್ವಾರೆಂಟೈನ್ ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಎಸ್. ರವಿಚಂದ್ರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ನಿನ್ನೆ ಮೃತಪಟ್ಟಿದ್ದು, ಗಂಟಲು ದ್ರವ ಪರೀಕ್ಷೆಯ ಬಳಿಕ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸರ್ಕಾರದ ಆದೇಶದಂತೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಭಟ್ಕಳದಲ್ಲಿ ಇದು ಮೊದಲ ಸಾವಿನ ಪ್ರಕರಣ ಆಗಿದ್ದು ಜನರು ಭಯಪಡುವ ಅವಶ್ಯಕತೆ ಇಲ್ಲ. ಮೃತನ ಸಂಪರ್ಕಿತರ ಮಾಹಿತಿ ಕಲೆ ಹಾಕಿ ಗಂಟಲು ದ್ರವ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.