ಕಾರವಾರ: ಕಡಲಾಮೆಗಳು ಪರಿಸ್ನೇಹಿ ಜೀವಿಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಅವುಗಳು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳ ಸಾಲಿಗೆ ಸೇರಿವೆ.
ಕಡಲಾಮೆಗಳ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಆಮೆಯ ಮೊಟ್ಟೆಗಳನ್ನ ಸಂರಕ್ಷಿಸುವ ಕೆಲಸವನ್ನು ಆರಂಭಿಸಿದೆ. ಹೀಗೆ ಸಂರಕ್ಷಿಸಲಾಗಿದ್ದ ಮೊಟ್ಟೆಗಳು ಇದೀಗ ಮರಿಗಳಾಗಿ ಹೊರಬಂದಿದ್ದು ಅವುಗಳನ್ನು ಇಂದು ಸಮುದ್ರಕ್ಕೆ ಸೇರಿಸುವ ಕಾರ್ಯ ಮಾಡಲಾಯಿತು.
ದೇವಭಾಗ್ ಕಡಲತೀರದಲ್ಲಿ ಕಳೆದ ಜನವರಿಯಲ್ಲಿ ಆಲಿವ್ ರಿಡ್ಲೇ ಕಡಲಾಮೆ ಒಟ್ಟು 103 ಮೊಟ್ಟೆಗಳನ್ನು ಇಟ್ಟಿದ್ದು ಅವುಗಳನ್ನು ಕಡಲತೀರದಲ್ಲಿಯೇ ಪಂಜರ ಹಾಕಿ ಸಂರಕ್ಷಿಸಲಾಗಿತ್ತು. ಇಂದು ಆ ಮೊಟ್ಟೆಗಳು ಮರಿಗಳಾಗಿ ಹೊರಬಂದಿವೆ.
ಕಡಲಾಮೆ ಮೊಟ್ಟೆಗಳು 45 ರಿಂದ 60 ದಿನಗಳಲ್ಲಿ ಮರಿಗಳಾಗಿ ಹೊರಬರುತ್ತವೆ. ಹೀಗಾಗಿ ಆಮೆಗಳು ಮೊಟ್ಟೆ ಇಟ್ಟ ಸ್ಥಳದಲ್ಲಿಯೇ ಅವುಗಳ ಗೂಡಿಗೆ ಪಂಜರ ಹಾಕಿ ನಾಯಿ ಇಲ್ಲವೇ ಇತರೆ ಪ್ರಾಣಿಗಳಿಗೆ ಸಿಗದಂತೆ ರಕ್ಷಣೆ ಮಾಡಲಾಗಿತ್ತು. ಬಳಿಕ ಅವುಗಳು ಮರಿಯಾದ ಬಳಿಕ ಸಮುದ್ರಕ್ಕೆ ಬಿಡಲಾಗುತ್ತದೆ. ಈ ಮೂಲಕ ಅಳಿವಿನ ಅಂಚಿನಲ್ಲಿರುವ ಕಡಲಾಮೆ ಸಂತತಿಯನ್ನ ಸಂರಕ್ಷಿಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.