ಕಾರವಾರ : ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳೇ ಉರುಳಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಅದೆಷ್ಟೋ ಹಳ್ಳಿಗಳ ಜನರು ಕಳೆದ ಏಳು ದಶಕಗಳಲ್ಲಿ ಒಂದು ರಸ್ತೆ ಸಂಪರ್ಕ ಪಡೆಯಲಾಗದೆ ಇಂದಿಗೂ ಅಗತ್ಯ ಮೂಲಸೌಕರ್ಯವಿಲ್ಲದ ಕುಗ್ರಾಮ ಎಂಬ ಹಣೆಪಟ್ಟಿಯಿಂದ ಬದುಕುವಂತಾಗಿದೆ. ಮಾತ್ರವಲ್ಲ, ಹೆರಿಗೆ ಮತ್ತು ಅನಾರೋಗ್ಯದಂತಹ ಅನೇಕ ಸಂದರ್ಭದಲ್ಲಿ ಜನರನ್ನು ಕಂಬಳಿಗಳನ್ನೇ ಜೋಳಿಗೆಯನ್ನಾಗಿ ಮಾಡಿ ಆಸ್ಪತ್ರೆಗೆ ಹೊತ್ತೊಯ್ಯಬೇಕಾದ ಪರಿಸ್ಥಿತಿ ಇದೆ.
ದಟ್ಟ ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಯ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ರಸ್ತೆ ಸಂಪರ್ಕವಿಲ್ಲ. ಅನೇಕ ಹಳ್ಳಿಗಳಿಗೆ ವಾಹನ ಸಂಚಾರವಿಲ್ಲದ ಕಾರಣ ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ಇಂತಹ ಘೋರ ಯಾತನೆಯಲ್ಲಿರುವ ಜೋಯಿಡಾ ತಾಲೂಕಿನ ಸಣಕಾ ಗ್ರಾಮದಲ್ಲಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ವೃದ್ಧೆಯನ್ನು ಕಂಬಳಿ ಜೋಳಿಗೆಯ ಮೂಲಕ ಆಸ್ಪತ್ರೆಗೆ ಸಾಗಿಸಿದ ಜನರು ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಜೋಯಿಡಾ ತಾಲೂಕಿನ ಸಣಕಾ ಗ್ರಾಮದಿಂದ ಘೊಡೇಗಾಳಿ ಗ್ರಾಮಕ್ಕೆ ಆಗಮಿಸಲು ಕಾಡಿನ ರಸ್ತೆಯೇ ಆಧಾರ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿ ಓಡಾಡಲೂ ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಸಣಕಾದ ನಿವಾಸಿ ದ್ರೌಪದಿ ಪಾವು ದೇಸಾಯಿ ಎಂಬ 80 ವರ್ಷದ ಮಹಿಳೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ವೃದ್ಧೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಈ ರಸ್ತೆಯಲ್ಲಿ ಅಂಬ್ಯುಲೆನ್ಸ್ ಬರಲು ಸಾಧ್ಯವಿಲ್ಲದ ಕಾರಣ ಕಂಬಳಿ ಜೋಳಿಗೆಯಲ್ಲಿ ಸುಮಾರು 2.5 ಕಿ.ಮೀ ಹೊತ್ತೊಯ್ದು ಬಳಿಕ ಅಲ್ಲಿಂದ ಖಾಸಗಿ ವಾಹನದ ಮೂಲಕ ದಾಂಡೇಲಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ :ರಸ್ತೆ ಇಲ್ಲದ ಕುಗ್ರಾಮ : ಸ್ಟ್ರೆಚರ್ನಲ್ಲೇ ಮೃತದೇಹ ಹೊತ್ತು ಸಾಗಿಸಿದ ಸಂಬಂಧಿಕರು