ಕಾರವಾರ: ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜ, ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದ ಮಗುವೊಂದು ಕಾರಣಾಂತರಗಳಿಂದ ಬಾಲಮಂದಿರ ಸೇರಿದೆ. ದಶಕಗಳ ಕಾಲ ಮಗಳಂತೆ ಸಾಕಿ ಸಲಹಿದ ಕಾರವಾರ ತಾಲೂಕಿನ ಶಿರವಾಡದ ಗೌರಮ್ಮ ಹಾಗೂ ಕೃಷ್ಣಪ್ಪ ವೃದ್ಧ ದಂಪತಿ ಮಗುವನ್ನು ಪುನಃ ಪಡೆಯಲು ಊಟ, ನಿದ್ರೆ ಬಿಟ್ಟು ಹಂಬಲಿಸುತ್ತಿದ್ದಾರೆ.
ಇದು ಸ್ಟೋರಿ
ಕಳೆದ ಮೂವತ್ತು ವರ್ಷಗಳ ಹಿಂದೆ ರಾಯಚೂರಿನಿಂದ ವಲಸೆ ಬಂದಿದ್ದ ಮಗುವಿನ ಪೋಷಕರು ಕಾರವಾರದಲ್ಲಿ ನೆಲೆ ಕಂಡುಕೊಂಡಿದ್ದರು. ಆದರೆ, ಇಬ್ಬರು ಹೆಚ್ಐವಿ ಸೋಂಕಿಗೆ ತುತ್ತಾದ ಕಾರಣ ಮಗು ಅನಾಥವಾಗಿತ್ತು. ಆಗ, ಅಜ್ಜಿ ಗೌರಮ್ಮ ಹಾಗೂ ಅಜ್ಜ ಕೃಷ್ಣಪ್ಪ ಮಗುವನ್ನು ಸಾಕಿದ್ದರು. ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆದ ಮಗುವಿಗೆ ಈಗ 11 ವರ್ಷ ವಯಸ್ಸು. ಈ ನಡುವೆ ಕಳೆದ ಕೆಲ ತಿಂಗಳ ಹಿಂದೆ ಕೃಷ್ಣಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಾಗ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದಾಗ, ವೃದ್ದ ದಂಪತಿಗೆ ತಿಳಿಸಿ ಕಾರವಾರದ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು. ಇದೀಗ ಆರೋಗ್ಯವಾಗಿ ಬಂದಿರುವ ದಂಪತಿ, ತಮ್ಮ ಮಗುವನ್ನು ತಮಗೆ ನೀಡಿ ಎಂದು ಅಂಗಲಾಚುತ್ತಿದ್ದಾರೆ.
ಮೊಮ್ಮಗಳಿಗಾಗಿ ಕಣ್ಣೀರು ಸುರಿಸುತ್ತಿರುವ ದಂಪತಿ ವೃದ್ಧ ದಂಪತಿಯ ಕಳಕಳಿ
ಬಾಲಕಿ ಚಿಕ್ಕವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರಿಂದ ಪೋಷಣೆ ಮಾಡಿದ್ದೇವೆ. ಮಗುವಿಗಾಗಿ ಕಾರವಾರ ಬ್ಯಾಂಕ್ಗಳಲ್ಲಿ ಹಣವನ್ನು ಸಹ ಡಿಪಾಸಿಟ್ ಮಾಡಿಟ್ಟಿದ್ದೇವೆ. ನಮ್ಮ ಮೊಮ್ಮಗಳು ನಮಗೆ ಬೇಕು, ಇಲ್ಲದಿದ್ದಲ್ಲಿ ಪ್ರಾಣ ಕಳೆದುಕೊಳ್ಳುತ್ತೇವೆ. ದಯಮಾಡಿ, ಮಗುವನ್ನು ನೀಡಿ ಎಂದು ಈ ದಂಪತಿ ಅಂಗಲಾಚುತ್ತಿದ್ದಾರೆ.
ಬಾಲಕಿ ಕೂಡ ನನಗೆ ಅಜ್ಜ ಅಜ್ಜಿ ಬೇಕು ಎಂದು ಅಳುತ್ತಿದ್ದಾಳೆ. ಹೀಗಾಗಿ ಬಾಲಕಿಯನ್ನು ನಮಗೆ ನೀಡಿದರೆ ಊರಿಗೆ ತೆರಳುತ್ತೇವೆ. ಭಿಕ್ಷೆ ಬೇಡಿಯಾದರೂ ಸಾಕುತ್ತೇವೆ ಎನ್ನುತ್ತಾರೆ ವೃದ್ಧ ದಂಪತಿ.
ಅಧಿಕಾರಿಗಳು ಹೇಳುವುದೇನು?
ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಮಗುವಿಗೆ ಯಾರೂ ಆಶ್ರಯ ಇಲ್ಲದ ಕಾರಣಕ್ಕಾಗಿ ಬಾಲ ಮಂದಿರಕ್ಕೆ ಸೇರಿಸಲಾಗಿತ್ತು. ಅಜ್ಜ ಅಜ್ಜಿಗೆ ವಯಸ್ಸಾಗಿರುವ ಕಾರಣ ಕುಟುಂಬದ ಬೇರೆ ಯಾರಾದರು ಇದ್ದಾರಾ ಎಂದು ವಿಚಾರಿಸಲಾಗಿದೆ. ಅಕ್ಕ ಅಂತ ಹೇಳಿ ಒಬ್ಬರು ಬಂದಿದ್ದಾರೆ. ಆದರೆ, ಅಕ್ಕನನ್ನು ಮಗು ಗುರುತಿಸುತ್ತಿಲ್ಲ. ಹೀಗಾಗಿ ಮಗುವಿನ ಸುರಕ್ಷತೆಯ ದೃಷ್ಟಿಯಿಂದ ಬಾಲ ಮಂದಿರದಲ್ಲಿ ಇಟ್ಟುಕೊಂಡಿದ್ದೇವೆ. ಸಾಮಾಜಿಕ ತನಿಖಾ ವರದಿ ಬಂದ ನಂತರ ಅಜ್ಜಅಜ್ಜಿ ಜೊತೆ ಮಗುವನ್ನು ಕಳುಹಿಸಿಕೊಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಹೇಳಿದ್ದಾರೆ.