ಕರ್ನಾಟಕ

karnataka

ETV Bharat / state

ಅನ್ನ ನೀರು ಇಲ್ಲದೇ ಕತ್ತಲೆ ಕೋಣೆಯಲ್ಲಿದ್ದ ವೃದ್ಧೆ: ನರಕಯಾತನೆಗೆ ಮುಕ್ತಿ ಕೊಡಿಸಿದ ನ್ಯಾಯಾಧೀಶರು - ಈಟಿವಿ ಭಾರತ ಕನ್ನಡ

ಗುಡಿಸಲಿನ ರೀತಿಯ ಕತ್ತಲೆ ಕೋಣೆಯಲ್ಲಿ ಅನ್ನ ನೀರು ಕೊಡದೇ ಸರಿಯಾಗಿ ನೋಡಿಕೊಳ್ಳದ ವೃದ್ಧೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶೆ ರೇಣುಕಾ ರಾಯ್ಕರ್ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.

old-age-woman-protected-by-judge-in-uttara-kannada
ನರಕಯಾತನೆಗೆ ಮುಕ್ತಿ ಕೊಡಿಸಿದ ನ್ಯಾಯಾಧೀಶರು

By

Published : Nov 19, 2022, 9:05 PM IST

ಕಾರವಾರ(ಉತ್ತರ ಕನ್ನಡ): ಮಾನಸಿಕ ಖಿನ್ನತೆಗೊಳಗಾಗಿದ್ದಾರೆ ಎಂಬ ಕಾರಣಕ್ಕೆ ಕುಟುಂಬಸ್ಥರು ವೃದ್ಧೆಯೊಬ್ಬರನ್ನು ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಸರಿಯಾಗಿ ಅನ್ನ ನೀರು ನೀಡದೇ ಅಮಾನವೀಯವಾಗಿ ನಡೆಸಿಕೊಂಡ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದ್ದು, ನ್ಯಾಯಾಧೀಶರೊಬ್ಬರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕಾರವಾರ ನಗರದ ಕೋಡಿಬಾಗದ ಜೋಪಡಿಯೊಂದರಲ್ಲಿ ಕಮಲಾ ಎಂಬ ವೃದ್ಧೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ವಾಸವಾಗಿದ್ದಳು. ಸ್ವಲ್ಪ ಮಾನಸಿಕ ಖಿನ್ನತೆಗೆ ಒಳಗಾದವರಂತೆ ಇರುವ ಈಕೆ ಮಲಗಿದ್ದಲ್ಲೆ ಮಲ - ಮೂತ್ರ ವಿಸರ್ಜನೆ ಮಾಡಿಕೊಂಡು ಅದರಲ್ಲೇ ವಾಸಮಾಡುತ್ತಿದ್ದಳು. ಇಷ್ಟಾದರೂ ಮನೆಯವರು ಆಕೆಯನ್ನು ಸರಿಯಾಗಿ ಆರೈಕೆ ಮಾಡದೇ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಅಮಾನೀಯವಾಗಿ ನಡೆದುಕೊಂಡಿದ್ದರು.

ಅನ್ನ ನೀರು ಇಲ್ಲದೆ ಕತ್ತಲೆ ಕೋಣೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದ ವೃದ್ಧೆಗೆ ಮುಕ್ತಿ ಕೊಡಿಸಿದ ನ್ಯಾಯಾಧೀಶೆ

ಆದರೆ ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶೆ ರೇಣುಕಾ ರಾಯ್ಕರ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ತೆರಳಿ ವೃದ್ಧೆಯ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಕಪಟ್ಟರು. ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ವೃದ್ಧ ಮಹಿಳೆಯ ಸಂಬಂಧಿಕರನ್ನು ಆಸ್ಪತ್ರೆಗೆ ಕರೆಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ನ್ಯಾ. ರೇಣುಕಾ ರಾಯ್ಕರ್ ಅವರು, ವೃದ್ಧೆಯನ್ನು ಕತ್ತಲೆ ಕೋಣೆಯಲ್ಲಿ ಕೂಡಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ತೆರಳಿದಾಗ ಬಾಗಿಲು ಇಲ್ಲದ ಗುಡಿಸಲಲ್ಲಿ ವೃದ್ಧೆ ಕೂಡಿ ಹಾಕಿದ್ದರು. ಓರ್ವ ಮಗನಿದ್ದಾನೆ ಎಂಬ ಮಾಹಿತಿ ಇದೆ. ಆದರೆ ನಾವು ಭೇಟಿ ನೀಡಿದ ವೇಳೆ ಅಲ್ಲಿ ಆತ ಇರಲಿಲ್ಲ. ಸ್ಥಳೀಯರು ಕೂಡ ವೃದ್ಧೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ತಯಾರಿರಲಿಲ್ಲ.

ಬಳಿಕ ಅವರ ಸಹೋದರನ ಸಂಪರ್ಕ ಮಾಡಿದಾಗ ನಮ್ಮೊಂದಿಗೆ ವಾಗ್ವಾದ ಮಾಡಿದ್ದರು. ಇಂತಹ ಸ್ಥಿತಿಗೆ ಯಾರು ತಳ್ಳಬಾರದು. ಸದ್ಯ ವೃದ್ಧೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಆಕೆ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದವಳಂತೆ ಯಾವುದೇ ವರ್ತನೆ ತೋರಿಲ್ಲ. ನಗರಸಭೆ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿ ಅವರ ವಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅಲ್ಲದೇ ವೃದ್ಧೆಗೆ ಅವಶ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ವರ್ಷದ ಕಂದಮ್ಮ: ಈ ಕುಟುಂಬಕ್ಕೆ ಬೇಕಿದೆ ನೆರವಿನ ಹಸ್ತ

ABOUT THE AUTHOR

...view details