ಕಾರವಾರ:ಕಡಲ ನಗರಿ ಕಾರವಾರದ ನಗರಸಭೆ ಅಧಿಕಾರಿಗಳ ಎಡವಟ್ಟಿನಿಂದ ಇದೀಗ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ನಗರಸಭೆಯಲ್ಲಿ ಹಣ ಇಲ್ಲದಿದ್ದರೂ ಅಧಿಕಾರಿಗಳು ಕೋಟಿಗಟ್ಟಲೆ ವೆಚ್ಚದ ಕಾಮಗಾರಿಗಳನ್ನು ಮಾಡಲು ಆದೇಶ ಪತ್ರ ನೀಡಿದ್ದರು. ಸದ್ಯ ಕಾಮಗಾರಿ ಮಾಡಿ ಮುಗಿಸಿದ ಗುತ್ತಿಗೆದಾರರು ತಮ್ಮ ಹಣಕ್ಕಾಗಿ ಪ್ರತಿನಿತ್ಯ ಇಲಾಖೆಗೆ ಅಲೆದಾಡುತ್ತಿದ್ದು, ಇತ್ತ ನಗರಸಭೆಯಲ್ಲಿ ಹಣವೇ ಇಲ್ಲವೆಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ನಗರಸಭೆಯಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು 10 ಕೋಟಿ ರೂ ವೆಚ್ಚದ 300ಕ್ಕೂ ಅಧಿಕ ಕಾಮಗಾರಿಗಳನ್ನು ಮಾಡಿಸಲಾಗಿದೆ. ನಗರಸಭೆ ನಿಧಿಯಲ್ಲಿ ಕಾಮಗಾರಿಗಳನ್ನು ಮಾಡಿಸಿದ್ದು ಕಾಮಗಾರಿ ಕೊಡುವ ಮುನ್ನ ಟೆಂಡರ್ ಕರೆದು ಕಾಮಗಾರಿಯ ಆದೇಶ ಪತ್ರವನ್ನು ನೀಡಿ ಗುತ್ತಿಗೆ ಕೆಲಸ ನೀಡಲಾಗಿತ್ತು. ಅದರಂತೆ ಕಾರವಾರ ನಗರದಲ್ಲಿ ಸುಮಾರು 50ಕ್ಕೂ ಅಧಿಕ ಗುತ್ತಿಗೆದಾರರು ಹತ್ತು, ಇಪ್ಪತ್ತು, ಐವತ್ತು ಲಕ್ಷ ಎನ್ನುವಂತೆ ನಗರಸಭೆ ನೀಡಿದ ಅನೇಕ ಕಾಮಗಾರಿಗಳನ್ನು ಮಾಡಿದ್ದರು. ಆದರೆ ನಗರಸಭೆಯ ನಿಧಿಯಲ್ಲಿ ದುಡ್ಡೇ ಇಲ್ಲದಿರುವುದು ಇದೀಗ ಕೆಲಸ ಮಾಡಿದ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಸುಮಾರು 10 ಕೋಟಿ ರೂಪಾಯಿ ಕಾಮಗಾರಿ ಮಾಡಿದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಗುತ್ತಿಗೆದಾರರು ನಗರಸಭೆಯ ಬಳಿ ಅಲೆದಾಡುತ್ತಿದ್ದು ಇತ್ತ ಹಣ ಇಲ್ಲದೇ ಅಧಿಕಾರಿಗಳು ನಾಳೆ ನಾಡಿದ್ದು ಎಂದು ದಿನ ದೂಡುತ್ತಿದ್ದು ನಗರಸಭೆಯ ಎಡವಟ್ಟಿಗೆ ಗುತ್ತಿಗೆದಾರ ದೀಪಕ್ ಕುಡಾಳಕರ್ ಆಕ್ರೋಶ ವ್ಯಕ್ತಪಡಿಸಿದರು.