ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸಲು ಸರ್ಕಾರ ಅಧಿಕೃತವಾಗಿ ಅನುಮತಿ ನೀಡಬೇಕೆಂಬ ಒತ್ತಾಯ ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿದೆ. ಮತ್ತೊಂದೆಡೆ, ಜಿಲ್ಲೆಯ ಕಾಳಿ ನದಿಯಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ದಂಧೆಕೋರರು ಬೇಕಾಬಿಟ್ಟಿ ದರಕ್ಕೆ ಮರಳು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕರಾವಳಿ ಭಾಗದ ಕಾಳಿ, ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಯಲ್ಲಿ ಈ ಹಿಂದಿನಿಂದ ಮರಳುಗಾರಿಕೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಹಸಿರು ಪೀಠದ ಆದೇಶದ ಮೇಲೆ ಮರಳುಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಮರಳಿನ ಸಮಸ್ಯೆ ಇರುವುದರಿಂದ ಅಧಿಕೃತವಾಗಿ ಮರಳುಗಾರಿಕೆಗೆ ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಜನರು ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರ ಅನುಮತಿ ನೀಡದ ಕಾರಣ ಅಕ್ರಮ ದಂಧೆಕೋರರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ದೂರುಗಳಿಂದ ಎಚ್ಚೆತ್ತ ಕಾರವಾರ ಉಪವಿಭಾಗಾಧಿಕಾರಿ ಕಳೆದ ಮೂರ್ನಾಲ್ಕು ದಿನಗಳಿಂದ ಕಾರವಾರ ತಾಲೂಕಿನ ವಿವಿಧ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ನೂರು ಮೆಟ್ರಿಕ್ ಟನ್ಗೂ ಅಧಿಕ ಮರಳನ್ನು ವಶಕ್ಕೆ ಪಡೆದಿದ್ದಾರೆ. ಕಾರವಾರ ತಾಲೂಕಿನ ಕೆರವಡಿ, ಹಣಕೋಣ, ಸುಂಕೇರಿ, ಕಿನ್ನರ ಸೇರಿದಂತೆ ವಿವಿಧ ಭಾಗದಲ್ಲಿ ದಾಳಿ ನಡೆಸಿ ಮರಳನ್ನು ವಶಕ್ಕೆ ಪಡೆಯಲಾಗಿದೆ.