ಶಿರಸಿ :ಭೀಕರ ಗಾಳಿ ಹಾಗೂ ಮಳೆಯಿಂದ ಉತ್ತರಕನ್ನಡ ಜಿಲ್ಲೆಯ ಅಡಿಕೆ ಬೆಳೆಗೆ ಉಂಟಾದ ನಷ್ಟಕ್ಕೆ ಪರಿಹಾರ ಹಾಗೂ ಬಾಕಿ ಇರುವ ಸಾಲಮನ್ನಾ ಹಣ ಶೀಘ್ರ ಬಿಡುಗಡೆ ಮಾಡಬೇಕು. ಈ ವಿಷಯ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪವಾಗಿ ರೈತರಿಗೆ ನ್ಯಾಯ ಸಿಗಬೇಕು ಎಂಬ ಆಗ್ರಹ ಕೇಳಿ ಬರ್ತಿದೆ.
ಜಿಲ್ಲೆಯಲ್ಲಿ ಅಡಿಕೆ ಬೆಳೆಹಾನಿ, ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಆಗ್ರಹ ಜಿಲ್ಲೆಯ ಕೃಷಿಕರು ಅಡಕೆ ಪ್ರಧಾನ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಇದನ್ನೇ ನಂಬಿ ಲಕ್ಷಾಂತರ ಕೃಷಿ, ಕೂಲಿಕಾರರ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಮಳೆಗಾಲದಲ್ಲಿ ಭೀಕರ ಗಾಳಿ ಹಾಗೂ ವಾಡಿಕೆಗಿಂತ ಹೆಚ್ಚು ಸುರಿದ ಮಳೆಯಿಂದ ಪ್ರತೀ ಎಕರೆಗೆ 1 ಕ್ವಿಂಟಲ್‌ವರೆಗೆ ರೈತರಿಗೆ ನಷ್ಟವಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 31124.15 ಹೆಕ್ಟೇರ್ ಅಡಕೆ ಕ್ಷೇತ್ರವಿದೆ. ಈ ಪೈಕಿ 20 ಸಾವಿರ ಹೆಕ್ಟೇರ್ ವಿಕೋಪದಿಂದ ಹಾನಿಯಾಗಿದೆ. ಇದರಿಂದ 320 ಕೋಟಿ ರೂ. ನಷ್ಟ ಸಂಭವಿಸಿದೆ. ರೈತರಿಗೆ ಶೀಘ್ರ ಪರಿಹಾರ ಸಿಗಬೇಕಿದೆ ಎಂದು ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಒತ್ತಾಯಿಸಿವೆ.
ರಾಜ್ಯ ಸರ್ಕಾರ ಘೋಷಿಸಿದ್ದ ರೈತರ 1 ಲಕ್ಷ ರೂ. ಸಾಲಮನ್ನಾ ಮೊತ್ತ ಕಳೆದೆರಡು ವರ್ಷಗಳಿಂದ ಬಂದಿಲ್ಲ. ಜಿಲ್ಲೆಯ 3388 ರೈತರ 20.90 ಕೋಟಿ ರೂ. ಬಾಕಿ ಉಳಿದಿದೆ. ಅಲ್ಲದೇ ಕಳೆದ ವರ್ಷದ ಮಳೆಯಿಂದ ನಷ್ಟ ಉಂಟಾದ ಬೆಳೆಗೂ ಪರಿಹಾರ ಸಿಕ್ಕಿಲ್ಲ. ಆದ ಕಾರಣ ಮುಂಬರುವ ಅಧಿವೇಶದಲ್ಲಿ ಇದು ಚರ್ಚೆಯಾಗಬೇಕಿದೆ.
ಉತ್ತರಕನ್ನಡ ಜಿಲ್ಲೆಯವರೇ ಆದ ವಿಧಾನ ಸಭಾಧ್ಯಕ್ಷರು ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂಬ ಕೂಗು ಕೇಳಿ ಬಂದಿದೆ. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಕೊಳೆ ಪರಿಹಾರ ನೀಡಿದಂತೆ ಯಡಿಯೂರಪ್ಪ ನವರೂ ಸಹ ಪರಿಹಾರ ಘೋಷಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.