ಕಾರವಾರ (ಉತ್ತರ ಕರ್ನಾಟಕ):ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತ ಸಾಗಿದೆ. ಜೊತೆಗೆ ಶಿಕ್ಷಕರ ಕೊರತೆಯೂ ಕೂಡಾ ಕಾಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕಿದ್ದ ಸರ್ಕಾರ ಇದೀಗ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳನ್ನೇ ಬಂದ್ ಮಾಡಲು ಮುಂದಾಗಿದೆ.
ಪಶ್ಚಿಮ ಘಟ್ಟಗಳ ಸರಣಿಗೆ ಹೊಂದಿಕೊಂಡೇ ಇರುವ ಗುಡ್ಡಗಾಡು ಜಿಲ್ಲೆ ಉತ್ತರಕನ್ನಡ. ಶೇಕಡಾ 80 ರಷ್ಟು ಅರಣ್ಯ ಪ್ರದೇಶವನ್ನೇ ಹೊಂದಿರುವ ಜಿಲ್ಲೆಯಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚಿಗೆ ಇದ್ದು, ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರತಿಯೊಂದು ಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಕೆಲವೆಡೆ ಗ್ರಾಮಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ತೀರಾ ಕುಸಿದಿದೆ. ಶೈಕ್ಷಣಿಕ ಜಿಲ್ಲೆಯಾದ ಕಾರವಾರದಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 148 ಶಾಲೆಗಳು ಇವೆ.
ಮತ್ತೊಂದು ಶೈಕ್ಷಣಿಕ ಜಿಲ್ಲೆಯಾದ ಶಿರಸಿಯಲ್ಲಿ ಸಹ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ 149 ಶಾಲೆಗಳನ್ನು ಗುರುತಿಸಲಾಗಿದೆ. ಈ ಶಾಲೆಗಳಲ್ಲಿ ಬಹುಪಾಲು ಕಾಯಂ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರಿಂದಲೇ ಶಾಲೆಗಳನ್ನು ನಡೆಸಲಾಗುತ್ತಿದೆ. ಆದರೆ, ಇದೀಗ ಶಿಕ್ಷಕರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ನೆರೆಯ ಶಾಲೆಗಳೊಂದಿಗೆ ವಿಲೀನಗೊಳಿಸುವ ಚಿಂತನೆಗೆ ಸರ್ಕಾರ ಮುಂದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು?:ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು, ''ನಾಲ್ಕೈದು ಜನ ಮಕ್ಕಳಿರುವ ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸುವುದರಿಂದ ಮಕ್ಕಳಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ. ಇಲ್ಲವಾದಲ್ಲಿ ಇಬ್ಬರು ಮಕ್ಕಳೇ ಫಸ್ಟ್ ಮತ್ತು ಸೆಕೆಂಡ್ ಬರುತ್ತಾರೆ. ಆದರೆ, ಇವರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟಲ್ಲಿ ಅನುಕೂಲವಾಗುತ್ತದೆ. ಇದನ್ನು ಮಾಡುವುದಕ್ಕೆ ವಿರೋಧ ಕೂಡ ಬರುವ ಸಾಧ್ಯತೆ ಇದೆ.