ಕರ್ನಾಟಕ

karnataka

ETV Bharat / state

ವ್ಯಾಕ್ಸಿನ್ ಸಿಗದೇ ಪರದಾಡುತ್ತಿರುವ ಅನಿವಾಸಿ ಭಾರತೀಯರು; ಉದ್ಯೋಗ ಕಳೆದುಕೊಳ್ಳುವ ಆತಂಕ! - ಕೊರೊನಾ ವ್ಯಾಕ್ಸಿನೇಷನ್

ಉತ್ತರ ಕನ್ನಡ ಜಿಲ್ಲೆಯ ಹಲವು ಮಂದಿ ವಿದೇಶದಲ್ಲಿ ನೆಲೆಸಿದ್ದು, ಸದ್ಯ ರಂಜಾನ್​ ಹಾಗೂ ಲಾಕ್​ಡೌನ್​ ಕಾರಣಕ್ಕೆ ತವರಿಗೆ ಮರಳಿದ್ದಾರೆ. ಇದೀಗ ವಿದೇಶಗಳ ತಮ್ಮ ಕಂಪನಿಗಳಿಂದ ಕರೆ ಬಂದಿದ್ದು, ವ್ಯಾಕ್ಸಿನ್​ ಹಾಕಿಸಿಕೊಳ್ಳದೇ ಅಲ್ಲಿಗೆ ಹೋಗುವಂತಿಲ್ಲ, ಇಲ್ಲಿ ಸರಿಯಾದ ಸಮಯಕ್ಕೆ ವ್ಯಾಕ್ಸಿನ್​ ಸಹ ಅಲಭ್ಯವಾಗಿದೆ. ಈ ಹಿನ್ನೆಲೆ ಈ ಎನ್​ಆರ್​​​ಐಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

karwar
karwar

By

Published : Jun 7, 2021, 10:35 PM IST

Updated : Jun 7, 2021, 10:52 PM IST

ಕಾರವಾರ: ಉದ್ಯೋಗ, ವಿದ್ಯಾಭ್ಯಾಸ ಹೀಗೆ ನಾನಾ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಅದೆಷ್ಟೊ ಮಂದಿ ವಿದೇಶಗಳಲ್ಲಿ ಬದುಕು ಕಟ್ಟುಕೊಂಡಿದ್ದಾರೆ. ಅದರಲ್ಲಿಯೂ ಅರಬ್ ರಾಷ್ಟ್ರಗಳಲ್ಲಿದ್ದು ರಂಜಾನ್, ಲಾಕ್​ಡೌನ್​​ ಎಂದು ಎರಡು ತಿಂಗಳ ರಜೆ ಮೇಲೆ ಜಿಲ್ಲೆಗೆ ಬಂದವರಿಗೆ ಇದೀಗ ವ್ಯಾಕ್ಸಿನ್ ಸಿಗದೇ ವೀಸಾ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಉತ್ತರ ಕನ್ನಡ ಜಿಲ್ಲೆಯ‌‌ ಅದರಲ್ಲಿಯೂ ಭಟ್ಕಳದ ಅತೀ ಹೆಚ್ಚು ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ. ಹತ್ತಾರು ವರ್ಷಗಳ ಹಿಂದೆ ಉದ್ಯೋಗಕ್ಕೆ ತೆರಳಿ‌ ಅಲ್ಲಿಯೇ ಬದುಕು ಕಟ್ಟಿಕೊಂಡವರು ಲಾಕ್​​ಡೌನ್, ರಂಜಾನ್ ಹಿನ್ನೆಲೆ ರಜೆ ಪಡೆದು ತಮ್ಮೂರಿಗೆ ಮರಳಿದ್ದರು. ಆದರೆ ಹೀಗೆ ಹುಟ್ಟೂರಿಗೆ ಮರಳಿದವರಿಗೆ ಹಲವು ದೇಶಗಳಿಂದ ಉದ್ಯೋಗಕ್ಕೆ ಮರಳುವಂತೆ ಬುಲಾವ್ ಬಂದಿದ್ದು, ಜೊತೆಗೆ ಆ ದೇಶಗಳು ವೀಸಾ ಸಹ ಕಳುಹಿಸಿಕೊಟ್ಟಿವೆ ಎನ್ನಲಾಗಿದೆ. ಇದರ ಜೊತೆಗೆ ತಮ್ಮ ದೇಶಕ್ಕೆ ಬರುವ ಮುನ್ನ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚನೆ ನೀಡುತ್ತಿರುವುದು ಇದೀಗ ಎನ್​ಆರ್​​ಐ ಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ವಿದೇಶದಿಂದ ಬಂದ ಉದ್ಯೋಗಿಗಳ ಪೈಕಿ ಬಹುತೇಕರು ಈವರೆಗೂ ಮೊದಲ ಸುತ್ತಿನ ವ್ಯಾಕ್ಸಿನ್ ಸಹ ಹಾಕಿಸಿಕೊಂಡಿಲ್ಲ. ಮೊದಲು ಬಹುತೇಕರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದಿದ್ದು, ಇದೀಗ ಅನಿವಾರ್ಯವಾದ ಕಾರಣ ಮುಂದೆ ಬಂದರೂ ವ್ಯಾಕ್ಸಿನ್ ಸಿಗದಂತಾಗಿದೆ. ಸದ್ಯ ಜಿಲ್ಲಾಡಳಿತದಿಂದ ಸರ್ಕಾರದ ಸೂಚನೆಯಂತೆ ಲಸಿಕೆ ಲಭ್ಯತೆ ಆಧಾರದಲ್ಲಿ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದರಿಂದ ಇದೀಗ ಭಟ್ಕಳ ಸೇರಿದಂತೆ ಹಲವು ತಾಲೂಕುಗಳಲ್ಲಿ ವಿದೇಶಕ್ಕೆ ತೆರಳಬೇಕೆಂದಿದ್ದ ಉದ್ಯೋಗಿಗಳು ವ್ಯಾಕ್ಸಿನ್ ನೀಡುವಂತೆ ದುಂಬಾಲು ಬೀಳುತಿದ್ದಾರೆ.

ವ್ಯಾಕ್ಸಿನ್ ಸಿಗದೇ ಪರದಾಡುತ್ತಿರುವ ಅನಿವಾಸಿ ಭಾರತೀಯರು

ಇನ್ನು, ರಾಜ್ಯದಲ್ಲಿ 18 ರಿಂದ 44 ವರ್ಷದ ಒಳಗಿನವರಿಗೆ ಲಸಿಕೆ ಅಭಿಯಾನ ಕುಂಟುತ್ತಿದೆ. 2ನೇ ಸುತ್ತಿನ ಲಸಿಕೆ ಪಡೆಯಲು ಸುಮಾರು ಮೂರು ತಿಂಗಳು ಕಾಯಬೇಕಾಗಿದೆ. ಅಷ್ಟರಲ್ಲಿ ಅವರು ಪಡೆದಿರುವ ಉದ್ಯೋಗದ ವೀಸಾ ಅಮಾನತಾಗುವ ಆತಂಕ ಕಾಡುತ್ತಿದೆ. ಒಂದು ಸುತ್ತಿನ ಲಸಿಕೆ ಪಡೆದು ವಿದೇಶ ಪ್ರಯಾಣ ಮಾಡಿದರೆ, ಎರಡನೇ ಸುತ್ತಿನ ಲಸಿಕೆ ಆ ದೇಶದಲ್ಲಿ ಲಭಿಸದಿದ್ದರೆ ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ವಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ವಿದೇಶಕ್ಕೆ ತೆರಳುವವರಿಗಾಗಿಯೇ ವ್ಯಾಕ್ಸಿನ್ ನೀಡುತ್ತಿರಲಿಲ್ಲ. ಆದರೆ, ಇದೀಗ ಸರ್ಕಾರದ ಸೂಚನೆಯಂತೆ ನೀಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದಿದ್ದಾರೆ. ಆದರೆ ಈವರೆಗೂ ವ್ಯಾಕ್ಸಿನ್ ಕೊರತೆ ಹಿನ್ನೆಲೆಯಲ್ಲಿ ಭಟ್ಕಳ ಸೇರಿದಂತೆ ಹಲವು ಭಾಗದಲ್ಲಿ ವಿದೇಶಕ್ಕೆ ತೆರಳುವವರಿಗೆ ವ್ಯಾಕ್ಸಿನ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಕೋವಿಡ್ ಕಾರಣದಿಂದ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಹಲವು ದೇಶಗಳು ಉದ್ಯೋಗಿಗಳ ವೀಸಾವನ್ನು ಅಮಾನತು ಮಾಡುವ ಅವಕಾಶಕ್ಕಾಗಿ ಕಾಯುತ್ತಿವೆ. ಇಂತಹ ಸಂದರ್ಭದಲ್ಲಿ ಲಸಿಕೆ ಕಾರಣ ನೀಡಿ ವಿದೇಶಕ್ಕೆ ತೆರಳದಿದ್ದರೆ ತಮ್ಮ ನೌಕರಿ ಕಳೆದುಕೊಳ್ಳವ ಕಳವಳ ಇವರದ್ದಾಗಿದೆ. ಹೀಗಿರುವಾಗ ವ್ಯಾಕ್ಸಿನ್ ಕೊರತೆ ಇದೀಗ ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರ ಉದ್ಯೋಗ ಕಸಿಯುವ ಸ್ಥಿತಿ ನಿರ್ಮಾಣವಾಗಿದೆ.

Last Updated : Jun 7, 2021, 10:52 PM IST

ABOUT THE AUTHOR

...view details