ಕಾರವಾರ: ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್.ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಈಗಾಗಲೇ ಮನೆಗಳ ಸಮೀಕ್ಷೆಗೆ ಗಡುವು ನೀಡಿರುವುದರಿಂದ ಸಮೀಕ್ಷೆ ವಿಳಂಬವಾಗದಂತೆ ಶೀಘ್ರವಾಗಿ ಹಾನಿಗೊಳಗಾದ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು. ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದಕ್ಕಾಗಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಅರ್ಹ ಫಲಾನುಭವಿಗಳು ಸಮೀಕ್ಷೆಯಿಂದ ತಪ್ಪಿ ಹೋಗಬಾರದು, ಮನೆ ಸಮೀಕ್ಷೆ ಸಂದರ್ಭದಲ್ಲಿ ಮನೆಯ ನೈಜ ಸ್ಥಿತಿಗತಿ ಪರಿಶೀಲಿಸಿ ಶೇಕಡಾವಾರು ಆದ ಹಾನಿಯನ್ನು ನಮೂದಿಸಬೇಕು. ಈ ಕಾರ್ಯಕ್ಕೆ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು.
ಒಂದು ವೇಳೆ ಫಲಾನುಭವಿಗಳು ತಪ್ಪು ಮಾಹಿತಿ ನೀಡಿದ್ದರೆ ಜಾಗ್ರತೆಯಿಂದ ಸಮೀಕ್ಷೆ ಕೈಗೊಂಡು ನೈಜ ಫಲಾನುಭವಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು. ಕಡಿಮೆ ಸಮಯದ ಗಡುವು ನೀಡಿರುವುದರಿಂದ ಎಲ್ಲರೂ ತಮಗೆ ನೀಡಿದಂತಹ ನಿಗದಿತ ಸಮಯದಲ್ಲಿ ಸರಿಯಾಗಿ ಕೆಲಸ ಮುಗಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕೆಂದರು.
ಈ ಸಂದರ್ಭದಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಪ್ರಿಯಾಂಗಾ ಎಮ್., ತಹಶೀಲ್ದಾರ ಆರ್.ವಿ.ಕಟ್ಟಿ ಸೇರಿದಂತೆ ಇತರರು ಹಾಜರಿದ್ದರು.