ಭಟ್ಕಳ :ಲಾಕ್‍ಡೌನ್ ಹಿನ್ನೆಲೆ ರೈತ ಬೆಳೆದ ಹಣ್ಣಿಗೆ ಬೆಲೆಯಿಲ್ಲದಂತಾಗಿದೆ. ಸದ್ಯ ಕಲ್ಲಂಗಡಿ ಹಣ್ಣಿನ ಕಟಾವಿಗೆ ಬಂದಿದೆಯಾದರೂ ಸೂಕ್ತ ಬೆಲೆ ಮಾತ್ರ ಸಿಕ್ಕಿಲ್ಲ.
ಮೂರುವರೆ ಎಕರೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದ ರೈತನ ಬದುಕು ಬೀದಿಗೆ ಬಿದ್ದಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ರೈತನೊಬ್ಬನ ಕನಸು ನುಚ್ಚು ನೂರಾಗಿದೆ. ಲಾಕ್‍ಡೌನ್ ಹಿನ್ನೆಲೆ ತಾನು ಬೆಳೆದ ಬೆಳೆಗೆ ಸರಿಯಾದ ಲಾಭ ಸಿಗದೆ ರೈತ ಕಂಗಾಲಾಗಿದ್ದಾನೆ. ತನ್ನ ಮೂರುವರೆ ಎಕರೆ ಹೊಲದಲ್ಲಿ ಒಟ್ಟು 1 ಲಕ್ಷದ 68 ಸಾವಿರ ರೂ. ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಹಣ್ಣನ್ನು ಕೇವಲ ₹35 ಸಾವಿರ ಕೊಟ್ಟು ವ್ಯಾಪಾರಿಯೊಬ್ಬರು ಖರೀದಿಸಿದ್ದಾರೆ.
ಕಲ್ಲಂಗಡಿ ಹಣ್ಣಿಗಿಲ್ಲ ಸೂಕ್ತ ಬೆಲೆ.. ರೈತರ ಸಂಕಷ್ಟ ಕೇಳುವವರಿಲ್ಲ.. ಬೆಳೆದ ಕಲ್ಲಂಗಡಿ ನಾಶ: ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆಗಳಿಗೆ ಕೊನೆಯ ಹಂತದಲ್ಲಿ ಸಕಾಲದಲ್ಲಿ ರಸಗೊಬ್ಬರ, ನೀರು ಹಾಕದ ಪರಿಣಾಮ ಸರಿಯಾದ ಫಲ ಸಿಗದೆ ಕೆಲ ಹಣ್ಣುಗಳು ಒಡೆದು ನಾಶವಾಗಿವೆ. ಈ ಹಿಂದಿನ ವಾತಾವರಣದ ವೈಪರೀತ್ಯದಿಂದ ನಷ್ಟ ಅನುಭವಿಸುವಂತಾಗಿದೆ. ಈಗ ಕೊರೊನಾದಿಂದ ರೈತ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ನಷ್ಟದ ಭೀತಿ:ಇನ್ನೊಂದೆಡೆ ರೈತರ ಬೆಳೆಯನ್ನು ಖರೀದಿಸುವವರಿಗೂ ನಷ್ಟದ ಭೀತಿ ಎದುರಾಗಿದೆ. ಕಡಿಮೆ ಬೆಲೆಗೆ ಕಲ್ಲಂಗಡಿ ಕೊಂಡುಕೊಂಡರೂ ಸಹ ಇತ್ತ ಲಾಕ್‍ಡೌನ್ ಹಿನ್ನೆಲೆ ಗ್ರಾಹಕರು ಹಣ್ಣನ್ನು ಕೊಂಡುಕೊಳ್ಳುತ್ತಾರಾ ಎನ್ನುವ ಭೀತಿ ಖರೀದಿದಾರರಿಗೆ ಎದುರಾಗಿದೆ.
ಅನ್ನದಾತರ ಮೊರೆ:ತೋಟಗಾರಿಕೆ ಇಲಾಖಾ ಸಮಿತಿಯವರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕಲ್ಲಂಗಡಿ ಹಣ್ಣಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಲ್ಲಂಗಡಿ ಬೆಳೆಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಎಂಬುದು ಅನ್ನದಾತರ ಮೊರೆ.