ಕಾರವಾರ: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜುಗಳಲ್ಲಿ ಭೌತಿಕ ತರಗತಿ ಆರಂಭಗೊಂಡಿದೆ. ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದಲೇ ಶಾಲೆಗಳತ್ತ ಮರಳಿದ್ದಾರೆ. ಆದರೆ ಕೋವಿಡ್ ಕಾರಣದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ವೇಳೆ ಸ್ಥಗಿತಗೊಳಿಸಿದ್ದ ಬಸ್ ಸೇವೆಗಳನ್ನು ಕೆಲ ಹಳ್ಳಿಗಳಲ್ಲಿ ಈವರೆಗೂ ಪ್ರಾರಂಭ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎರಡು ಬಾರಿ ಲಾಕ್ಡೌನ್ ಮಾಡಲಾಯ್ತು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು, ಎಲ್ಲ ವ್ಯವಸ್ಥೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜೊತೆಗೆ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಕೂಡ ಉತ್ಸಾಹದಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಕಾರವಾರದ ಕೇರವಡಿ, ಕಿನ್ನರ, ಸಿದ್ದರ, ಅರ್ಗಾ, ಅಮದಳ್ಳಿ, ದೇವಳಮಕ್ಕಿ, ಭೈರೆ, ಕದ್ರಾ, ಮಲ್ಲಾಪುರ ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಕೊರೊನಾ ಕಾರಣದಿಂದಾಗಿ ಸ್ಥಗಿತಗೊಳಿಸಿದ್ದ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಪ್ರಾರಂಭಿಸದೇ ಇರುವುದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಕೊರೊನಾ ನಿಯಮಗಳು?
ಕೆಲವೆಡೆ ಕೆಲ ಬಸ್ಗಳನ್ನು ಮಾತ್ರ ಆರಂಭಿಸಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ಗಳಲ್ಲಿ ನಿಲ್ಲುವುದಕ್ಕೂ ಜಾಗವಿಲ್ಲದೇ ಕೊರೊನಾ ನಿಯಮಗಳನ್ನು ಬದಿಗೊತ್ತಿ ಮನೆಗೆ ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿದೆ.