ಶಿರಸಿ (ಉತ್ತರಕನ್ನಡ): ದೇಶಕ್ಕೆ ಸ್ವಾತಂತ್ರ್ಯ ಲಬಿಸಿ 75 ವರ್ಷ ಕಳೆದಿದ್ದರೂ ಕೂಡ ಮಲೆನಾಡಿನ ಹಲವೆಡೆ ಸಮರ್ಪಕ ಮೂಲ ಸೌಕರ್ಯದ ಕೊರತೆ ಎದ್ದು ಕಾಡುತ್ತಿದೆ. ಮಲೆನಾಡಿನ ಹಲವು ಗ್ರಾಮಗಳು ಇಂದಿಗೂ ಸರಿಯಾದ ರಸ್ತೆ, ಸೇತುವೆ ಇಲ್ಲದೇ ಪರದಾಡಬೇಕಿದೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ಅಡವಿಮನೆ ಭಾಗದ ಸುತ್ತಮುತ್ತಲಿನ ಗ್ರಾಮದ ಜನರು ಇಂದಿಗೂ ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ಸರ್ಕಾರದ ಯೋಜನೆಗೆ ಕಾದು ಕಾದು ಸುಸ್ತಾಗಿದ್ದಾರೆ.
ಹೌದು.., ಶಿರಸಿ ತಾಲೂಕು ಕೇಂದ್ರದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಅಡವಿಮನೆ ಗ್ರಾಮದ ಜನರು ಮಳೆಗಾಲದಲ್ಲಿ ಕಾಲುಸಂಕದ ಮೂಲಕ ನಗರಕ್ಕೆ ಬರಬೇಕಾದ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಡವಿಮನೆಯಲ್ಲಿ ದೊಡ್ಡ ಹೊಳೆ ಇದ್ದು, ಹೊಳೆಯ ಆ ಕಡೆ ಮತ್ತು ಈ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಸುಮಾರು 17 ಕುಟುಂಬಗಳಿದ್ದು, ಇವರೆಲ್ಲರ ಜಮೀನು ಹೊಳೆಯ ಮತ್ತೊಂದು ಬದಿಯಲ್ಲಿ ಇದೆ. ಇವರು ಅಡಿಕೆ, ಭತ್ತ ಬೆಳೆಯುತ್ತಾರೆ.
ಹೊಳೆದಾಟಲು ಕಾಲಸುಂಕವೇ ಗತಿ: ಆದರೆ ಮಳೆಗಾಲದಲ್ಲಿ ಮಾತ್ರ ಜಮೀನಿಗೆ ಹೋಗುವುದು ಕಷ್ಟ. ಸಂಪರ್ಕಕ್ಕಾಗಿ ಕಳೆದ ಸುಮಾರು 50-60 ವರ್ಷಗಳಿಂದ ಬಿದಿರಿನ ಕಾಲುಸಂಕ ನಿರ್ಮಿಸಿಕೊಂಡು ಜಮೀನಿನಲ್ಲಿ ಕೆಲಸ ಮಾಡಿ ಬರುತ್ತಾರೆ. ಧಾರಾಕಾರ ಮಳೆ ಸುರಿದು ಭೀಕರ ಪ್ರವಾಹ ಉಂಟಾಗಿ ನೀರಿನಲ್ಲಿ ಬಿದಿರಿನ ಕಾಲು ಸಂಕ ತೇಲಿ ಹೋಗಿರುವ ಉದಾಹರಣೆಯೂ ಇದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸಂಕದ ಮೇಲೆ ಶಾಲೆಗಳಿಗೆ ತೆರಳುತ್ತಿದ್ದಾರೆ. ಈ ಭಾಗಕ್ಕೆ ಅತ್ಯಗತ್ಯವಾಗಿರುವ ಅಡವಿಮನೆ ಹೊಳೆಗೆ ಸೇತುವೆ ನಿರ್ಮಾಣವಾದರೆ ಇಲ್ಲಿನ ಜನರ ಬಹು ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ.
ಹೊಳೆಗೆ ಸುಸಜ್ಜಿತವಾದ ಸೇತುವೆ ನಿರ್ಮಾಣವಾದರೆ, ಹುಲೇಕಲ್ ಮತ್ತು ನೀರ್ನಳ್ಳಿ ಗ್ರಾಪಂ ಸಂಪರ್ಕಕ್ಕೆ ಬಹಳ ಹತ್ತಿರವಾಗುತ್ತಿತ್ತು. ಇಲ್ಲವಾದರೆ ಮಳೆಗಾಲದಲ್ಲಿ ಸುತ್ತಿ ಬಳಸಿ ನಗರಕ್ಕೆ ಮತ್ತು ಪಂಚಾಯತಗೆ ತೆರಳಿ ತಮ್ಮ ಕೆಲಸ ನಿರ್ವಹಿಸಿಕೊಂಡು ಬರಬೇಕಾದ ಸ್ಥಿತಿ ಇದೆ.