ಕಾರವಾರ:ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಚರ್ಚೆಯ ವಿಚಾರವಾಗಿದೆ. ಟಿಕೆಟ್ಗಾಗಿ ಕಾಂಗ್ರೆಸ್ ಪಕ್ಷದ ಹದಿನೈದು ಮುಖಂಡರಿಂದ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇದರ ನಡುವೆ ಇದೀಗ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರು ಪುತ್ರ ವಾತ್ಸಲ್ಯದಿಂದ ಮಗನನ್ನು ಕುಮಟಾ ಕ್ಷೇತ್ರದಲ್ಲಿ ಇಳಿಸಲು ಮುಂದಾಗಿರುವುದು ಪಕ್ಷದಲ್ಲಿಯೇ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದು ಈ ಕುರಿತು ವರದಿ ಇಲ್ಲಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಇನ್ನು ಜಿಲ್ಲೆಯಲ್ಲಿ ಈ ಬಾರಿ ಕುಮಟಾ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಹದಿನೈದು ಮುಖಂಡರು ತಲಾ 2 ಲಕ್ಷವನ್ನು ಕೆಪಿಸಿಸಿಗೆ ತುಂಬಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ಗಾಗಿ ತಮಗೆ ಪರಿಚಯ ಇರುವ ನಾಯಕರುಗಳೊಂದಿಗೆ ಬಹುತೇಕ ಎಲ್ಲಾ ಮುಖಂಡರು ಪ್ರಯತ್ನ ನಡೆಸಿದ್ದು ಕ್ಷೇತ್ರದಲ್ಲಿ ಟಿಕೆಟ್ ರಾಜಕೀಯ ಸಾಕಷ್ಟು ರಂಗ ಪಡೆದಿತ್ತು. ಇದರ ನಡುವೆ ನಡೆದ ಬೆಳವಣಿಗೆ ಎಲ್ಲಾ ಟಿಕೆಟ್ ಆಕಾಂಕ್ಷಿಗಳಿಗೂ ಶಾಕ್ ಆಗುವಂತೆ ಮಾಡಿದೆ. ಮಾಜಿ ರಾಜ್ಯಪಾಲೆ ಕಾಂಗ್ರೆಸ್ ಮುಖಂಡೆ ಮಾರ್ಗರೇಟ್ ಆಳ್ವಾ ಪುತ್ರ ವಾತ್ಸಲ್ಯದಿಂದ ತಮ್ಮ ಮಗ ನಿವೇದಿತ್ ಆಳ್ವಾರನ್ನು ಕುಮಟಾ ಕ್ಷೇತ್ರದಿಂದ ನಿಲ್ಲಿಸಲು ಮುಂದಾಗಿದ್ದಾರೆ. ಇನ್ನು ಕುಮಟಾದಿಂದ ಟಿಕೆಟ್ಗಾಗಿ ಅರ್ಜಿ ಸಲ್ಲಿಸದ ನಿವೇದಿತ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮುಂದಾಗಿರುವುದು ಪಕ್ಷದ ವಲಯದಲ್ಲಿಯೇ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಾಯಿ ಗಾಂವಕರ್ ಮಾತನಾಡಿ, ಕುಮದಿಂದ ಸ್ಫರ್ಧಿಸಲು 14 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು ಈಗಾಗಲೇ ಮೂರ್ನಾಲ್ಕು ಮಂದಿ ಹೆಸರು ಎಐಸಿಸಿಗೆ ಕಳುಹಿಸಿಲಾಗಿದೆ. ನಿವೇದಿತ್ ಆಳ್ವಾ ಕೂಡ ಕುಮಟಾದ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ನೀಡುವ ಜವಬ್ಧಾರಿಯನ್ನು ಹೈಕಮಾಂಡ್ ಮಾಡುತ್ತದೆ. ನಿವೇದಿತ್ ಆಳ್ವಾ ಅವರಿಗೂ ಸಿಗಬಹುದು ಅಥವಾ ಶಾರದಾ ಶೆಟ್ಟಿ ಇನ್ನಿತರ ಆಕಾಂಕ್ಷಿಗಳಿಗೂ ಸಿಗಬಹುದು. ಇದು ಹೈಕಮಾಂಡ್ ನಿರ್ಧಾರವಾಗಿರುವುದರಿಂದ ಅದಕ್ಕೆ ಕಾರ್ಯಕರ್ತರಾದ ನಾವೆಲ್ಲರೂ ಬದ್ಧರಾಗಿರಬೇಕು. ಅರ್ಜಿ ಸಲ್ಲಿಸಿದವರು ಹಾಗೂ ಈ ಹಿಂದೆ ಪಕ್ಷಕ್ಕಾಗಿ ದುಡಿದವರು ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಲೇಬೇಕು. ಮಾಜಿ ಸಂಸದೆ ಮಾರ್ಗರೇಟ್ ಆಳ್ವಾ ಅವರ ಮಗ ನಿವೇದಿತ್ ಆಳ್ವಾ ಕೂಡ ಇಡೀ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ಅವರಿಗೆ ಜಿಲ್ಲೆಯಲ್ಲಿ ಯಾವ ಕ್ಷೇತ್ರವನ್ನಾದರೂ ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಅವರು ಕುಮಟಾ ಕ್ಷೇತ್ರ ಕೇಳಿರಬಹುದು. ಆದರೆ, ಈ ಹಿಂದೆ ಶಿರಸಿ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಏನೇ ಇದ್ದರೂ ಕೂಡ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುವುದೋ ಕಾರ್ಯಕರ್ತರೆಲ್ಲರೂ ಅದಕ್ಕೆ ಬದ್ಧರಾಗಿರಬೇಕು. ಅದೇ ಅಭ್ಯರ್ಥಿಯನ್ನೆ ಬೆಂಬಲಿಸಬೇಕು ಎಂದು ಹೇಳುತ್ತಾರೆ.