ಭಟ್ಕಳ: ಯಾವುದೇ ಕ್ಷೇತ್ರವಿರಲಿ ಗಂಡಸರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಸಾಧಿಸಿ ತೋರಿಸುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಗತ್ತು ಗೈರತ್ತು ಕಡಿಮೆ ಏನಿಲ್ಲ. ಇದೀಗ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೊದಲ ಬಾರಿಗೆ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಪಿಎಸ್‌ಐ ಸುಮಾ ಬಿ. ನೇತೃತ್ವದಲ್ಲಿ ರಾತ್ರಿ ರಸ್ತೆಗೆ ಇಳಿದ ಮಹಿಳಾ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿದರು. ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದರು. ಯಾವುದೇ ಅಳುಕು ಇಲ್ಲದೆ ತಂಡ ಕಟ್ಟಿಕೊಂಡು ಭಟ್ಕಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.
ನಸುಕಿನ ಜಾವ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸುವ ಮೂಲಕ ಹೊಸ ಅನುಭವ ಪಡೆದರು. ಮೊದಲ ದಿನ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಪೊಲೀಸರನ್ನು ರಾತ್ರಿ ಗಸ್ತಿಗೆ ನಿಯೋಜಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.