ಶಿರಸಿ: ಭಾರತಮಾಲಾ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಹೆದ್ದಾರಿಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಿದೆ. ಬೇಲಿಕೇರಿ - ಕುಮಟಾ- ಶಿರಸಿ ರಸ್ತೆಯ ಅಭಿವೃದ್ಧಿಗೆ ಪರಿಸರ ಹೋರಾಟಗಾರರು ಮತ್ತು ಆಡಳಿತ ವರ್ಗದವರ ನಡುವೆ ಜಟಾಪಟಿ ಆರಂಭವಾಗಿದ್ದು, ಇನ್ನೆನು ಹೆದ್ದಾರಿ ನಿರ್ಮಾಣ ಕಾರ್ಯ ಆರಂಭ ಆಗಲಿದೆ ಎನ್ನುವಷ್ಟರಲ್ಲಿ ಪುನಃ ಈ ಕುರಿತು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದರಿಂದ ಸದ್ಯ ಪ್ರಾರಂಭವಾಗುತ್ತಿರುವ ಹೆದ್ದಾರಿ ನಿರ್ಮಾಣಕ್ಕೆ ಮತ್ತೆ ಆತಂಕ ಎದುರಾಗುತ್ತಿದೆ.
ಶಿರಸಿ - ಕುಮಟಾ ರಸ್ತೆ ಅಭಿವೃದ್ಧಿಗೆ ಮತ್ತೆ ವಿಘ್ನ ಭಾರತ ಮಾಲಾ ಯೋಜನೆಯಡಿ ಬೇಲೆಕೇರಿ - ಶಿರಸಿ ಮುಖ್ಯ ರಸ್ತೆಗೆ ಅನುದಾನ ದೊರೆತಿತ್ತು. ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುತ್ತಿದ್ದು, ಇದರಿಂದ ಸಾಕಷ್ಟು ಅನುಕೂಲ ಆಗುತ್ತಿದೆ. ಈ ರಸ್ತೆ ಪಶ್ಚಿಮಘಟ್ಟದ ದಟ್ಟ ಕಾಡು ಇರೋ ದೇವಿಮನೆ ಘಟ್ಟ ಪ್ರದೇಶದಲ್ಲಿ ಹಾದು ಹೋಗುತ್ತಿರೋದರಿಂದ ಬಹಳಷ್ಟು ಅರಣ್ಯ ಪ್ರದೇಶ ನಾಶವಾಗುತ್ತಿದೆ ಎಂದು ಈ ಹಿಂದೆ ರಸ್ತೆ ನಿರ್ಮಾಣ ನಿಂತಿತ್ತು. ಈ ಬಗ್ಗೆ ಹಸಿರು ಪೀಠಕ್ಕೆ ಕೂಡ ಈ ಹಿಂದೆ ಅರ್ಜಿ ಸಲ್ಲಿಕೆಯಾಗಿತ್ತು.
ರಸ್ತೆ ನಿರ್ಮಾಣದಿಂದ ಆಗುವ ಪರಿಸರ ನಾಶದ ಬಗ್ಗೆ ವಾದ - ಪ್ರತಿವಾದಗಳನ್ನು ಆಲಿಸಿದ ಹಸಿರು ಪೀಠ ನಾಶವಾಗುವ ಮರಗಳಿಗೆ ಬದಲಾಗಿ ಅರಣ್ಯವನ್ನು ಬೆಳೆಸಬೇಕು ಅಂತ ಷರತ್ತನ್ನು ಹಾಕಿ ಒಂದನೇ ಹಂತಕ್ಕೆ ಮಾತ್ರ ಅನುಮತಿ ನೀಡಿತ್ತು. ಅದರಂತೆ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಆದೇಶ ಕೂಡ ಹೊರಡಿಸಿದ್ದರು. ಆದರೆ ಈಗ ಪುನಃ ಅದಕ್ಕೆ ವಿಘ್ನ ಎದುರಾಗಿದ್ದು, ಪರಿಸರ ಹೋರಾಟಗಾರರ ಕಾರ್ಯಕ್ಕೆ ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ನಮ್ಮನ್ನ ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಸೋಮಶೇಖರ್
ಜಿಲ್ಲಾಧಿಕಾರಿ ಆದೇಶದ ನಂತರ ರಸ್ತೆ ನಿರ್ಮಾಣ ಆರಂಭವಾಗಬೇಕಿತ್ತು. ಇದರ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿ ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ರಸ್ತೆ ಮಾಡೋಕೆ ಗುತ್ತಿಗೆ ಪಡೆದಿತ್ತು. ಆದರೆ, ಪರ್ಯಾಯ ರಸ್ತೆಗಳ ಗೊಂದಲದ ನಡುವೆ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಮಲೆನಾಡಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ರಸ್ತೆ ನಿರ್ಮಾಣದಿಂದಾಗಿ ಜಿಲ್ಲೆಯ ಅಭಿವೃದ್ಧಿ ಜೊತೆ ಸಂಪರ್ಕ ಸಾಧಿಸೋದು ಸುಲಭವಾಗುತ್ತಿತ್ತು. ಆದರೆ, ಇದೀಗ ಇನ್ನೇನು ರಸ್ತೆ ನಿರ್ಮಾಣ ಆಗುತ್ತೆ ಅನ್ನುವಷ್ಟರಲ್ಲಿ ಮತ್ತೆ ಬೆಂಗಳೂರಿನ ಎನ್ಜಿಓ ಒಂದು ಹೈಕೋರ್ಟ್ ಗೆ ರಿಟ್ ಸಲ್ಲಿಸಿದೆ. ರಸ್ತೆ ನಿರ್ಮಾಣದಿಂದ ತುಂಬಾ ಅರಣ್ಯ ಪ್ರದೇಶ ನಾಶವಾಗುತ್ತೆ. ಆದ್ದರಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಕೊಡಬೇಕು ಅಂತ ತನ್ನ ಅರ್ಜಿಯಲ್ಲಿ ಆ ಸಂಸ್ಥೆ ನಮೂದಿಸಿದೆ. ಈ ರಿಟ್ ಅರ್ಜಿಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಹಸಿರು ಪೀಠವೇ ಹಸಿರು ನಿಶಾನೆ ತೋರಿದ ಮೇಲೆ ಮತ್ತೆ ತಡೆಯಾಜ್ಞೆಗೆ ಹೋಗಿರೋದು ಜಿಲ್ಲೆಯ ಅಭಿವೃದ್ಧಿಗೆ ಮಾರಕ ಅನ್ನೋದು ಜಿಲ್ಲೆಯ ಪ್ರಮುಖರ ಅಭಿಪ್ರಾಯವಾಗಿದೆ.