ಕಾರವಾರ: ಭಾರತೀಯ ನೌಕಾಪಡೆಗೆ ಹೊಸದಾಗಿ ನಿಯೋಜನೆಗೊಂಡಿರುವ ಜಲಾಂತರ್ಗಾಮಿ ನಿರೋಧಕ ನೌಕೆಗೆ ಕಾರವಾರ ಸಮೀಪದ ಐತಿಹಾಸಿಕ ಅಂಜುದೀವ್ ದ್ವೀಪದ ಹೆಸರಿಡಲಾಗಿದೆ. ಕೊಲ್ಕತ್ತಾ ಗಾರ್ಡನ್ ರಿಚ್ ಶಿಪ್‌ಬಿಲ್ಡ್ ಅಂಡ್ ಎಂಜಿನಿಯರ್ಸ್ ಎಂಬ ಕಂಪನಿಯಲ್ಲಿ ಹೆಚ್ಚಾಗಿ ದೇಸಿ ತಂತ್ರಜ್ಞಾನ ಹಾಗೂ ಉಪಕರಣ ಬಳಸಿ ನಿರ್ಮಾಣ ಮಾಡಲಾದ ನೌಕೆಯನ್ನು ಇತ್ತೀಚೆಗೆ ಚೆನೈನ ಕಟ್ಟುಪಲ್ಲಿಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ಇನ್ನು ಅಂಜುದೀವ್ ನೌಕೆ ಸಂಬಂಧ 2019 ರಲ್ಲಿ ರಕ್ಷಣಾ ಇಲಾಖೆ ಹಾಗೂ ಕಂಪನಿಯ ಜತೆ ಒಪ್ಪಂದವಾಗಿತ್ತು. ಇದುವರೆಗೆ ಇದೇ ಮಾದರಿಯ ಎರಡು ಹಡಗುಗಳನ್ನು ನೌಕಾಪಡೆಗೆ ಸೇರಿಸಲಾಗಿದ್ದು, ಇದು ಮೂರನೇ ಹಡಗಾಗಿದೆ. 77ಮೀಟರ್ ಉದ್ದವಿರುವ ಈ ಹಡಗು ಅತ್ಯಾಧುನಿಕ ಯುದ್ಧ ತಂತ್ರಜ್ಞಾನ, ಶಸ್ತ್ರಗಳನ್ನು ಹೊಂದಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯ ನೌಕೆಗೆ ಇದೆ.
ನೌಕೆಗಳಿಗೆ ರಾಜ್ಯದ ಪ್ರಮುಖ ಸ್ಥಳಗಳ ಹೆಸರು:ಭಾರತೀಯ ನೌಕಾ ಸೇನೆಗೆ ಸೇರ್ಪಡೆಯಾಗುವ ನೌಕೆಗಳಿಗೆ ದೇಶದ ಪ್ರಮುಖ ಊರುಗಳ, ದ್ವೀಪಗಳ ಹೆಸರಿಡುವ ವಾಡಿಕೆ ಇದೆ. ಐಎನ್‌ಎಸ್ ಕಾರವಾರ, ಐಎನ್‌ಎಸ್ ಮೈಸೂರು ಹೀಗೆ ಕರ್ನಾಟಕದ ಊರುಗಳ ಹೆಸರಿನ ಹಲವು ನೌಕೆಗಳು ನೌಕಾಸೇನೆಯಲ್ಲಿ ಕಾರ್ಯನಿರ್ವಹಿಸಿವೆ.
ಕಾರವಾರದಿಂದ 5 ಕಿ.ಮೀ ದೂರದಲ್ಲಿದೆ ದ್ವೀಪ:ಕಾರವಾರ ನಗರದ ಬಿಣಗಾದಿಂದ ಸಮುದ್ರದಲ್ಲಿ ಸುಮಾರು 3 ಕಿಮೀ ದೂರದಲ್ಲಿರುವುದು ಅಂಜುದೀವ್ ಎಂಬ ಪುಟ್ಟ ದ್ವೀಪ. ಕೇವಲ 150 ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿದೆ. ಕಾರವಾರದ ಕಣ್ಣಳತೆಯಲ್ಲೇ ಇದ್ದರೂ ಈ ದ್ವೀಪವು ತೀರ ಇತ್ತೀಚಿನವರೆಗೆ ಗೋವಾ ರಾಜ್ಯಕ್ಕೆ ಸೇರಿತ್ತು. 2005 ರಿಂದ ಈ ದ್ವೀಪವು ಕದಂಬ ನೌಕಾನೆಲೆಯ ವ್ಯಾಪ್ತಿಗೆ ಸೇರಿದೆ. ದ್ವೀಪಕ್ಕೆ ನೌಕಾಸೇನೆಯು ದಡದಿಂದ ಅಲೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ವಾಹನ ಓಡಾಟದ ವ್ಯವಸ್ಥೆ ಮಾಡಲಾಗಿದೆ. ವಾಸ್ಕೋಡಿ ಗಾಮ ಸಹ ಈ ದ್ವೀಪದಲ್ಲಿ ತಂಗಿದ್ದ ಇತಿಹಾಸ ಈ ದ್ವೀಪಕ್ಕಿದೆ.