ಕಾರವಾರ(ಉತ್ತರಕನ್ನಡ) :ಕರಾವಳಿ ಜಿಲ್ಲೆ ಉತ್ತರಕನ್ನಡ ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ಹತ್ತು ಹಲವು ಪ್ರವಾಸಿ ತಾಣಗಳು. ಆದರೆ, ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಇಲ್ಲಿನ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವಂತಿರಲಿಲ್ಲ. ಹೀಗಾಗಿ, ಈ ಸಮಸ್ಯೆಗೆ ಜಿಲ್ಲಾಡಳಿತ ಒಂದು ಪರಿಹಾರವನ್ನು ಕಂಡುಕೊಂಡಿದೆ.
ಉತ್ತರಕನ್ನಡ ಸಾಕಷ್ಟು ಪ್ರವಾಸಿ ತಾಣಗಳ ಆಗರವಾಗಿದೆ. ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಕರಾವಳಿಯಲ್ಲಿ ಓಂ, ಕುಡ್ಲೆ, ಟ್ಯಾಗೋರ್, ತೀಳಮಾತಿಯಂಥಹ ಕಡಲತೀರಗಳು, ಗೋಕರ್ಣ, ಮುರ್ಡೇಶ್ವರ, ಶಿರಸಿಯ ಮಾರಿಕಾಂಬೆಯ ದೇಗುಲದಂಥಹ ಧಾರ್ಮಿಕ ತಾಣಗಳು, ಟಿಬೇಟಿಯನ್ ಕಾಲೋನಿಯೆಂಬ ಸಂಸ್ಕೃತಿಯ ತಾಣ ಸೇರಿ ವಿಭಿನ್ನ ಸಮುದಾಯಗಳನ್ನು ಹೊಂದಿರುವ ಜಿಲ್ಲೆ ವಿವಿಧತೆಯಲ್ಲಿ ಏಕತೆ ಸಾರುತ್ತಿದೆ. ಆದರೆ, ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ತಾಣಗಳ ಕುರಿತು ಒಂದೆಡೆ ಸಂಪೂರ್ಣ ಮಾಹಿತಿ ಒದಗಿಸುವುದು ಇಷ್ಟು ವರ್ಷಗಳ ಕಾಲ ಸಾಧ್ಯವಾಗಿರಲಿಲ್ಲ.
ನೂತನ ವೆಬ್‌ಸೈಟ್ :ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೂತನ ಕ್ರಮಕ್ಕೆ ಮುಂದಾಗಿದ್ದಾರೆ. ದಾಂಡೇಲಿ, ಜೋಯಿಡಾದ ಅರಣ್ಯ ಪರಿಸರ ವೀಕ್ಷಿಸಿದವರು ಅನತಿ ದೂರದ ಕಾರವಾರ, ಹೊನ್ನಾವರ ಭಾಗದ ಪ್ರವಾಸಿ ತಾಣಗಳಿಗೂ ಭೇಟಿ ನೀಡುವಂತಾಗಬೇಕು.
ಇಲ್ಲಿಗೆ ಬರುವ ಪ್ರವಾಸಿಗರಿಗೆ ಅವರ ಅಂಗೈನಲ್ಲೇ ಜಿಲ್ಲೆಯ ಸಂಸ್ಕೃತಿ, ಆಹಾರ ವೈವಿಧ್ಯತೆ, ಸಂಪ್ರದಾಯಗಳ ಕುರಿತು ಮಾಹಿತಿ ಸಿಗುವಂತಾಗಬೇಕೆಂಬ ನಿಟ್ಟಿನಲ್ಲಿ https://uttarakannada.org/ ವೆಬ್‌ಸೈಟ್ ಅನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ, ಅಲ್ಲಿಗೆ ತಲುಪುವುದು ಹೇಗೆ ಎಂಬ ವಿವರಗಳನ್ನು ಸಂಗ್ರಹಿಸಿ ಈ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ವಾಸೋದ್ಯಮ ಇಲಾಖೆಯಡಿ ವೆಬ್‌ಸೈಟ್ :ಈ ವೆಬ್‌ಸೈಟ್ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿದೆ. ಇದು ರೂಪುಗೊಳ್ಳುವಲ್ಲಿ ಮೂವರು ಯುವಕರ ತಂಡ ಶ್ರಮವಹಿಸಿದೆ. ಉರಗ ತಜ್ಞರಾದ ಓಂಕಾರ್ ಪೈ ವೆಬ್‌ಸೈಟ್‌ನಲ್ಲಿ ವೈಲ್ಡ್‌ಲೈಫ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರೆ, ಸಾತ್ವಿಕ್ ಭಟ್ ವೆಬ್‌ಸೈಟ್ ಡಿಸೈನ್ ಮಾಡಿದ್ದಾರೆ. ಗೋಪಿ ಜೋಲಿ ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದ ಅತ್ಯುತ್ತಮ ಫೋಟೋಗಳನ್ನು ನೀಡಿ ವೆಬ್‌ಸೈಟ್‌ನ ಇನ್ನಷ್ಟು ಅಂದಗೊಳಿಸಿದ್ದಾರೆ.