ಕಾರವಾರ(ಉತ್ತರಕನ್ನಡ):ಸಿಹಿ ನೀರಿನಲ್ಲಿ ಕಂಡುಬರುವ ಹೊಸ ಕುಲದ ಏಡಿಯೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಭಾಗದಲ್ಲಿ ಪತ್ತೆಯಾಗಿದ್ದು, ಇದಕ್ಕೆ 'ಆರಾಧ್ಯ ಪ್ಲಾಸಿಡಾ' ಎಂದು ನಾಮಕರಣ ಮಾಡಲಾಗಿದೆ. ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆ, ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿಯವರು ಪುಣೆಯ ಪ್ರಾಣಿ ಸರ್ವೇಕ್ಷಣಾಲಯದ ಡಾ.ಸಮೀರಕುಮಾರ ಪಾಟಿ ಅವರೊಂದಿಗೆ ಸೇರಿ ಈ ಹೊಸ ಕುಲದ ಏಡಿಯನ್ನು ಪತ್ತೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದೊಂದು ಹೊಸ ಕುಲದ ಏಡಿ ಪತ್ತೆ ಕಾರ್ಯ ನಡೆಸಲಾಗಿದೆ.
ಹೊಸ ಕುಲಕ್ಕೆ ಆರಾಧ್ಯ ಎಂದು ನಾಮಕರಣ: ಯಲ್ಲಾಪುರ ಭಾಗದಲ್ಲಿ ಪತ್ತೆಯಾದ ಏಡಿಯ ಹೊಸ ಕುಲಕ್ಕೆ ಆರಾಧ್ಯ ಎಂದೂ, ಹೊಸ ಪ್ರಭೇದಕ್ಕೆ ಪ್ಲಾಸಿಡಾ ಎಂದೂ ಹೆಸರಿಸಲಾಗಿದೆ. ಆರಾಧ್ಯ, ಏಡಿ ಪತ್ತೆ ಮಾಡಿದ ನಿಸರ್ಗ ತಜ್ಞ ಗೋಪಾಲಕೃಷ್ಣ ಹೆಗಡೆಯವರ ಕಿರಿಯ ಮಗಳ ಹೆಸರಾಗಿದೆ. ಅದೇ ಹೆಸರನ್ನು ಈ ಏಡಿಯ ಕುಲಕ್ಕೆ ಇಡಲಾಗಿದೆ. ಇದು ಸಿಹಿ ನೀರಿನ ಏಡಿಯಾಗಿದ್ದು, ಗೋಪಾಲಕೃಷ್ಣ ಹೆಗಡೆಯವರ ತೋಟದಲ್ಲೇ ಪತ್ತೆಯಾಗಿದೆ.
ಹೊಸ ಜಾತಿಯ ಗುಣಲಕ್ಷಣಗಳು:'ಆರಾಧ್ಯ' ಕುಲದ ಏಡಿಗಳು ಸಿಹಿ ನೀರಿನಲ್ಲಿ ಕಂಡುಬರುವ ಹಾಗೂ ಬಹಳ ಸೌಮ್ಯ ಸ್ವಭಾವದ್ದಾಗಿದೆ ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಯಾವುದೇ ಏಡಿಗಳನ್ನು ಒಂದು ಕಡೆಯಲ್ಲಿ ಗುಂಪಾಗಿಸಿಟ್ಟರೆ ಅವು ಕೊಂಬುಗಳನ್ನು ಮುರಿದುಕೊಳ್ಳುವವರೆಗೂ ಹೊಡೆದಾಡಿಕೊಳ್ಳುತ್ತವೆ. ಆದರೆ ಈ ಏಡಿಗಳು ಮಾತ್ರ ಯಾವುದೇ ಆಕ್ರಮಣ ಮಾಡದೆ, ಒಂದು ಜಾಗದಲ್ಲಿ ನಿಶ್ಯಬ್ಧವಾಗಿ ಕುಳಿತುಕೊಂಡಿರುತ್ತವೆ ಎಂಬುದು ಸಂಶೋಧಕರಿಗೆ ತಿಳಿದುಬಂದಿದೆ.