ಕರ್ನಾಟಕ

karnataka

ETV Bharat / state

ಪೋಷಕರು ಕೊಡೆ ಹಿಡಿದ್ರು, ಕೆಲವರು ಟೆಂಟ್​ ನಿರ್ಮಿಸಿದ್ರು: ನೆಟ್​ವರ್ಕ್​ ಸಿಗದೇ ವಿದ್ಯಾರ್ಥಿಗಳ ನರಕಯಾತನೆ! - ಆನ್‌ಲೈನ್ ಕ್ಲಾಸ್

ನೆಟ್​ವರ್ಕ್​​ ಸಮಸ್ಯೆಯಿಂದಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಆನ್​​ಲೈನ್​ ಕ್ಲಾಸ್​ ಕೇಳಲು ಪರದಾಡುವಂತಾಗಿದೆ.

network issues to online classes in villages
ನೆಟ್​ವರ್ಕ್​ ಸಿಗದೇ ವಿದ್ಯಾರ್ಥಿಗಳ ನರಕಯಾತನೆ!

By

Published : Jun 19, 2021, 7:16 PM IST

ಸುಳ್ಯ: ಗ್ರಾಮೀಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಎಂಬುದು ಇದೀಗ ನರಕ ದರ್ಶನ ಮಾಡಿಸುತ್ತಿದೆ. ಹೌದು, ಸುಳ್ಯ ಹಾಗೂ ಕಡಬ ತಾಲೂಕಿನ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳ ಪರದಾಟ ಹೇಳ ತೀರದು.

ಸುಳ್ಯ ತಾಲೂಕಿನ ಮೊಗ್ರ, ಬಳ್ಳಕ್ಕ, ಗುತ್ತಿಗಾರು, ಪಂಜ, ಜಾಲ್ಸೂರು, ಸಂಪಾಜೆ, ಕಲ್ಮಕಾರು, ಕಡಮಕಲ್ಲು, ಐನೆಕಿದು, ಹರಿಹರ, ಪಲ್ಲತಡ್ಕ, ಕನಕಮಜಲು, ಏನೆಕಲ್ಲು ಕಲ್ಲುಗುಂಡಿಯ ಕೆಲವು ಕಡೆ ಹಾಗೂ ತಾಲೂಕಿನ ಹಲವು ಒಳ ಪ್ರದೇಶಗಳಲ್ಲಿ ಮತ್ತು ಕಡಬ ತಾಲೂಕಿನ ಬಳ್ಪ, ಕೊಂಬಾರು, ಗುಂಡ್ಯ, ಬಿಸಿಲೆ, ಸಿರಿಬಾಗಿಲು, ಉದನೆ, ಕುಕ್ಕೆ ಸುಬ್ರಹ್ಮಣ್ಯದ ಕೆಲವು ಪ್ರದೇಶಗಳಲ್ಲಿ, ಬೆಳ್ತಂಗಡಿ ತಾಲೂಕಿನ ಶಿಬಾಜೆ, ಶಿಶಿಲ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ನೆಟ್​ವರ್ಕ್​​ ಸಮಸ್ಯೆ ಎದುರಾಗಿದ್ದು, ಆನ್​ಲೈನ್​ ಕ್ಲಾಸ್​ಗೆ ಪರದಾಡುವಂತಾಗಿದೆ.

ಆನ್​ಲೈನ್​ ಕ್ಲಾಸ್​: ನೆಟ್​ವರ್ಕ್​ ಸಿಗದೇ ವಿದ್ಯಾರ್ಥಿಗಳ ನರಕಯಾತನೆ!

ಭಾರೀ ಗಾಳಿ ಮಳೆ ನಡುವೆ ಜೀವ ಕೈಯಲ್ಲಿ ಹಿಡಿದು ಆನ್‌ಲೈನ್ ಕ್ಲಾಸ್​​ಗೆ ಹಾಜರಾಗಬೇಕಾದ ಪರಿಸ್ಥಿತಿ ಇದೆ. ಗುಡ್ಡದ ಮೇಲೆ, ನೆಟ್​ವರ್ಕ್​​ ಸಿಗುವ ರಸ್ತೆ, ಅರಣ್ಯಗಳ ನಡುವೆ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದಾರೆ. ಕೈಯಲ್ಲಿ ಕೊಡೆ ಹಿಡಿದುಕೊಂಡು ಕೆಲವು ವಿದ್ಯಾರ್ಥಿಗಳಿಗೆ ಪೋಷಕರು ನೆರವಾದರೆ, ಇನ್ನೂ ಕೆಲವು ಕಡೆಗಳಲ್ಲಿ ಅರಣ್ಯ ಮತ್ತು ಗುಡ್ಡದಲ್ಲಿ ಟೆಂಟ್ ನಿರ್ಮಿಸಿ ಕ್ಲಾಸ್ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:ಕದ್ರಾ ಜಲಾಶಯ ಭರ್ತಿ: 26,916 ಕ್ಯೂಸೆಕ್ ನೀರು ಕಾಳಿ ನದಿಗೆ

ತಾಲೂಕಿನ ಕೆಲವು ಕಡೆಗಳಲ್ಲಿ ಅಂದರೆ ನೆಟ್​​ವರ್ಕ್​​ ಸಿಗುವ ಕಡೆಗಳಲ್ಲಿ ವೈಫೈ ಅಳವಡಿಸಿ ಇತರೆ ವಿದ್ಯಾರ್ಥಿಗಳಿಗೆ ಕೆಲವು ವಿದ್ಯಾರ್ಥಿಗಳು ನೆರವು ನೀಡುತ್ತಿದ್ದಾರೆ.ಒಂದು ಕಾಲದಲ್ಲಿ ಗ್ರಾಮಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದ ಬಿಎಸ್‌ಎನ್‌ಎಲ್‌ ಇದೀಗ ಸರಿಯಾಗಿ ನೆಟ್‌ವರ್ಕ್‌ ಸಿಗದೇ ಶೋಚನೀಯ ಪರಿಸ್ಥಿತಿಯಲ್ಲಿದೆ.

ಒಂದು ಕಾಲದಲ್ಲಿ ಪ್ರತಿ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌, ಖಾಸಗಿ ಮೊಬೈಲ್‌ ನೆಟ್​ವರ್ಕ್​​ ಕಂಪೆನಿಗಳು ಬಂದ ಬಳಿಕ ಹಂತ - ಹಂತವಾಗಿ ತನ್ನ ನೆಟ್‌ವರ್ಕ್‌ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಾ ಸಾಗಿ ಇದೀಗ ಬಳಕೆದಾರರು ಹಿಡಿಶಾಪ ಹಾಕುವ ಪರಿಸ್ಥಿತಿಗೆ ಬಂದು ನಿಂತಿದೆ. ಕೆಲವು ಪ್ರದೇಶಗಳಲ್ಲಿ ಕರೆಂಟ್‌ ಹೋದರೆ ಬಿಎಸ್‌ಎನ್‌ಎಲ್‌ ಸಂಪರ್ಕ ಕಳೆದುಕೊಳ್ಳುತ್ತಿದ್ದು, ಕರೆಂಟ್‌ ಇರುವಾಗ ಮಾತ್ರ ಸೇವೆ ಒದಗಿಸುತ್ತಿದೆ.

ಆದರೆ, ಇನ್ನೂ ಕೆಲವು ಗ್ರಾಮೀಣ ಭಾಗಗಳಲ್ಲಿ ಕರೆಂಟ್‌ ಇದ್ದರೂ, ಇಲ್ಲದಿದ್ದರೂ ನೆಟ್‌ವರ್ಕ್‌ ಸಿಗುವುದೇ ಇಲ್ಲ. ಹೆಚ್ಚಿನ ಕಡೆಗಳಲ್ಲಿ ಟವರ್‌ನ ಬ್ಯಾಟರಿ ಚಾರ್ಜ್‌ ಮಾಡಲು ಜನರೇಟರ್‌ಗೆ ಸಮರ್ಪಕವಾಗಿ ಡೀಸೆಲ್‌ ಒದಗಿಸಲಾಗುತ್ತಿಲ್ಲ. ಇದೀಗ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯೂ ವಿಪರೀತವಾಗಿದೆ.

ಇನ್ನಾದರೂ ಜನಪ್ರತಿನಿಧಿಗಳು, ಸರ್ಕಾರವು ನೆಟ್​ವರ್ಕ್​​ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಕ್ರಮ ಕೈಗೊಂಡು ಸಮರ್ಪಕ ನೆಟ್​ವರ್ಕ್​ ಸೇವೆ ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.

ABOUT THE AUTHOR

...view details