ಕರ್ನಾಟಕ

karnataka

ETV Bharat / state

ನೌಕಾಪಡೆಯ ಸೂಕ್ಷ್ಮ ಮಾಹಿತಿ ಸೋರಿಕೆ ಪ್ರಕರಣ: ಬಟ್ಟೆ ವ್ಯಾಪಾರಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ - Karwar crime latest news

ನೌಕಾನೆಲೆಯಲ್ಲಿ ಗೂಢಚರ್ಯೆ ನಡೆಸಿ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಎನ್ಐಎ ಗೋಧ್ರಾ ಮೂಲದ ಬಟ್ಟೆ ವ್ಯಾಪಾರಿ ವಿರುದ್ಧ ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ನೌಕಾಪಡೆಯ ಸೂಕ್ಷ್ಮ ಮಾಹಿತಿ ಸೋರಿಕೆ ಪ್ರಕರಣ
Navy information leak case

By

Published : Mar 15, 2021, 11:23 AM IST

ಕಾರವಾರ: ನೌಕಾನೆಲೆಯಲ್ಲಿ ಗೂಢಚರ್ಯೆ ನಡೆಸಿ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯು ಗೋಧ್ರಾ ಮೂಲದ ಬಟ್ಟೆ ವ್ಯಾಪಾರಿ ವಿರುದ್ಧ ವಿಜಯವಾಡದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ಗುಜರಾತ್‌ನ ಪಂಚಮಹಲ್‌ನ ಗೋಧ್ರಾ ನಿವಾಸಿ ಇಮ್ರಾನ್ ಯಾಕುಬ್ ಗೀತೇಲಿ ಅಲಿಯಾಸ್ ಗೀತೇಲಿ ಇಮ್ರಾನ್ ಎನ್ನುವವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 2019 ರಲ್ಲಿ ಸೂಕ್ಷ್ಮ ಮಾಹಿತಿಗಳನ್ನು ಪೂರೈಸಿದ ನೌಕಾಪಡೆಯ ಸಿಬ್ಬಂದಿಯೊಂದಿಗೆ ಈತ ಮಧ್ಯಸ್ಥಿಕೆ ವಹಿಸಿದ್ದ ಎನ್ನಲಾಗಿದೆ. ಹೀಗಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿ ಈತನ ಮೇಲೆ ಆರೋಪ ಹೊರಿಸಲಾಗಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಬಟ್ಟೆ ವ್ಯಾಪಾರಕ್ಕಾಗಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ವ್ಯಾಪಾರಿ ಪಾಕಿಸ್ತಾನದ ಏಜೆಂಟರುಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದನು. ಪಾಕಿಸ್ತಾನದ ಐಎಸ್‌ಐ ಏಜೆಂಟರ ಸೂಚನೆಯ ಮೇರೆಗೆ ಸೂಕ್ಷ್ಮ ಮತ್ತು ನೌಕಾಪಡೆಗಳ ಕಾರ್ಯತಂತ್ರದ ಮಾಹಿತಿಯನ್ನು ರವಾನಿಸಲು ನೌಕಾ ಸಿಬ್ಬಂದಿಯ ಖಾತೆಗಳಿಗೆ ಹಣವನ್ನು ವರ್ಗಾಯಿಸುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದ ಎಂದು ತಿಳಿದುಬಂದಿದೆ.

ಬಟ್ಟೆ ವ್ಯಾಪಾರದ ಹೆಸರಿನಲ್ಲಿ ಅಕ್ರಮವಾಗಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣವನ್ನು ಕೂಡ ಸಂಗ್ರಹಿಸುತ್ತಿದ್ದ ಎಂಬ ಆರೋಪ ಹೊತ್ತಿರುವ ಈತನನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. ಭಾರತೀಯ ಸರ್ಕಾರದ ವಿರುದ್ಧ ಕ್ರಿಮಿನಲ್ ಪಿತೂರಿ ಅಥವಾ ಯುದ್ಧ ಮಾಡಲು ಪ್ರಯತ್ನಿಸುತ್ತಿರುವ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3ರ ಅಡಿ ಆಂಧ್ರಪ್ರದೇಶ ಪೊಲೀಸರ ಸಿಐ ಸೆಲ್ ವಿಭಾಗದಲ್ಲಿ ಈ ಪ್ರಕರಣ ಮೊದಲು 2019ರ ನವೆಂಬರ್​ 16ರಂದು ದಾಖಲಾಗಿತ್ತು.

ನಂತರ ಗೂಢಚರ್ಯೆ ಪ್ರಕರಣವು ಮುಂಬೈ ನೌಕಾನೆಲೆ, ಕಾರವಾರದ ನೌಕಾನೆಲೆ ಮತ್ತು ವಿಶಾಖಪಟ್ಟಣಂ ನೌಕಾಪಡೆಗೆ ಸಂಪರ್ಕ ಹೊಂದಿದ್ದರಿಂದ ಎನ್ಐಎ 2019ರ ಡಿಸೆಂಬರ್ 29ರಂದು ಈ ಪ್ರಕರಣವನ್ನು ವಹಿಸಿಕೊಂಡಿತು. ಎನ್‌ಐಎ ಕೆಲವು ನಾವಿಕರು ಮತ್ತು ನಾಗರಿಕರು ಸೇರಿದಂತೆ 14 ಜನರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ. ವಿಜಯವಾಡದ ಕೌಂಟರ್ ಇಂಟೆಲಿಜೆನ್ಸ್ ವಿಭಾಗ, ನೌಕಾಪಡೆಯ ಗುಪ್ತಚರ ಇಲಾಖೆ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ನಡೆಸಿದ ‘ಡಾಲ್ಫಿನ್ಸ್ ನೋಸ್’ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಏಳು ನಾವಿಕರ ಚಲನವಲನಗಳನ್ನು ಹಲವು ದಿನಗಳವರೆಗೆ ಪತ್ತೆ ಹಚ್ಚಿ ಅವರನ್ನು 2019ರಲ್ಲಿ ಬಂಧಿಸಲಾಗಿತ್ತು.

ಓದಿ: ಭದ್ರಾವತಿಯಲ್ಲಿ ನಡೆದ ಕಾಂಗ್ರೆಸ್ ಗೂಂಡಾಗಿರಿಯನ್ನು ನಾವು ಖಂಡಿಸುತ್ತೇವೆ: ವಿಜಯೇಂದ್ರ

ಈ ಪ್ರಕರಣದಲ್ಲಿ ಏಳು ನಾವಿಕರು, ಮೂವರು ನಾಗರಿಕರು ಮತ್ತು ಇತರರನ್ನು ಬಂಧಿಸಲಾಗಿದೆ. ಮಹಿಳೆಯರ ಖಾತೆಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನಾವಿಕರಿಗೆ ಆಮಿಷವೊಡ್ಡಿ, ಪಾಕಿಸ್ತಾನದ ಹ್ಯಾಂಡ್ಲರ್​​​ಳಾಗಿದ್ದ ಸ್ವಯಂ ಘೋಷಿತ ಉದ್ಯಮಿಗಳಿಗೆ ನಾವಿಕರನ್ನು ಆನ್‌ಲೈನ್‌ನಲ್ಲಿ ಪರಿಚಯಿಸಲಾಗಿತ್ತು. 2017 ರಲ್ಲಿ ನೇಮಕಗೊಂಡಿದ್ದ ನಾವಿಕರು 2018ರ ಸೆಪ್ಟೆಂಬರ್‌ನಲ್ಲಿ ಈ ಹನಿಟ್ರ್ಯಾಪ್‌ಗೆ ಸಿಲುಕಿದ್ದರು.

ತಾವು ಕಾರ್ಯಾಚರಿಸುವ ಸ್ಥಳಗಳು, ಪ್ರಮುಖ ಜಲಾಂತರ್ಗಾಮಿ ನೌಕೆಗಳು, ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ನಾವಿಕರನ್ನು ಬಳಸಿಕೊಳ್ಳಲಾಗಿತ್ತು. ಅವರಿಗೆ ಹವಾಲಾ ಆಪರೇಟರ್ ಗಳ ಮೂಲಕ ಹಣ ನೀಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಜಬ್ಬರ್‌ ಎನ್ನುವಾತನನ್ನು ಬಂಧಿಸಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ.

ABOUT THE AUTHOR

...view details