ಕಾರವಾರ (ಉತ್ತರ ಕನ್ನಡ):ಚಂಡೀಗಢನಲ್ಲಿ ನಡೆದ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವು ಉತ್ತಮ ಸಾಧನೆ ಮಾಡಿದೆ. ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು 1 ಬೆಳ್ಳಿ ಹಾಗೂ 2 ಕಂಚಿನ ಪದಕ ಗಳಿಸಿದೆ.
11 ವರ್ಷದೊಳಗಿನ ಕೆಡೆಟ್ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡದ ಆಟಗಾರ್ತಿಯರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಕೈಗಾದ ಆದ್ಯಾ ನಾಯ್ಕ ನೇತೃತ್ವದ ತಂಡ ಹರಿಯಾಣ ಎದುರು 6-0, ಆಂಧ್ರಪ್ರದೇಶ ಎದುರು 3-0 ವಿಜಯ ಗಳಿಸಿತ್ತು. ನಂತರ ಕೇರಳ ಜೊತೆಗೆ 2-0, ತಮಿಳುನಾಡು ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿತ್ತು. ಬಳಿಕ ಕೇರಳ ತಂಡದ ಜೊತೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವಿನ ಕೇಕೆ ಹಾಕಿತ್ತು. ಬಳಿಕ ಪಂಜಾಬ್ ವಿರುದ್ಧ ನಡೆದ ಫೈನಲ್ ಪಂದ್ರದಲ್ಲಿ 1-2 ಅಂತರಗಳಿಂದ ಪರಾಭವಗೊಂಡ ಕರ್ನಾಟಕ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
ತಂಡದಲ್ಲಿ ಕೈಗಾದ ಆದ್ಯಾ ನಾಯ್ಕ (ಕ್ಯಾಪ್ಟನ್), ಭವನೀತ ತುಮಕೂರು, ದೇದಿಪ್ಯ ತುಮಕೂರು, ಅಕ್ಷರಾ ಶಿರಸಿ, ಐಶ್ವರ್ಯ ತುಮಕೂರು, ಕವನ ತುಮಕೂರು, ಸನ್ನಿಧಿ ತುಮಕೂರು, ಅಹನಾ ನಾಯ್ಕ ಕಾರವಾರ, ಕುಶಾಲ ಬೆಂಗಳೂರು, ಅನಯಾ ಕಾರವಾರದಿಂದ ಪ್ರತಿನಿಧಿಸಿದ್ದರು.
ಕೆಡೆಟ್ ಮಿಕ್ಸಡ್ ವಿಭಾಗ:ಕೆಡೆಟ್ ಮಿಕ್ಸಡ್ ವಿಭಾಗದಲ್ಲಿ ಆರಂಭದ ಪಂದ್ಯ ತಮಿಳುನಾಡು ಜೊತೆಗೆ ಡ್ರಾ, ಆಂಧ್ರಪ್ರದೇಶ, ಕೇರಳ ಎದುರು ಗೆದ್ದು ಸೆಮಿಫೈನಲ್ ತಲುಪಿತ್ತು. ಬಳಿಕ ಮತ್ತೆ ಎದುರಾದ ಕೇರಳ ಜೊತೆಗಿನ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡಿತ್ತು. ನಂತರ ಅಂಕಗಳ ಆಧಾರದ ಮೇಲೆ ಮೂರನೇ ಸ್ಥಾನಕ್ಕಾಗಿ ಆಂಧ್ರಪ್ರದೇಶ ತಂಡದೊಂದಿಗೆ ನಡೆದ ಪಂದ್ಯದಲ್ಲಿ 1-3 ಅಂಕ ಗಳಿಸಿ ಕಂಚಿನ ಪದಕಕ್ಕಾಗಿ ತೃಪ್ತಿಪಟ್ಟುಕೊಂಡಿತ್ತು.