ಕಾರವಾರ (ಉತ್ತರ ಕನ್ನಡ):ಮೂರು ವರ್ಷದಲ್ಲಿ ಮುಗಿಯಬೇಕಿದ್ದ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣಾ ಕಾಮಗಾರಿ ಕಳೆದ 10 ವರ್ಷದಿಂದ ಕುಂಟುತ್ತಾ ಸಾಗುತ್ತಿದೆ. ಈ ಅರೆಬರೆ ಹೆದ್ದಾರಿ ಕಾಮಗಾರಿಯಿಂದ ಜನಸಾಮಾನ್ಯರು ಹಾಗೂ ನಿತ್ಯ ಸಂಚರಿಸುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಇಂದು ಶನಿವಾರ ತಾವೇ ಖುದ್ದಾಗಿ ಈ ಹೆದ್ದಾರಿಯಲ್ಲಿ ಬಸ್ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಕರಾವಳಿ ತಾಲೂಕಿನ ಉದ್ದಕ್ಕೂ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಚತುಷ್ಪಥಗೊಳಿಸುವ ಕಾಮಗಾರಿ ಕಳೆದ 10 ವರ್ಷಗಳಿಂದ ಗುತ್ತಿಗೆ ಪಡೆದ ಐಆರ್ಬಿ ಕಂಪನಿ ನಡೆಸುತ್ತಿದೆ. ಆರಂಭದಲ್ಲಿ ಕಾಮಗಾರಿಯನ್ನು 3 ವರ್ಷದಲ್ಲಿ ಮುಗಿಸುವಂತೆ ಗುತ್ತಿಗೆ ನೀಡಲಾಗಿತ್ತಾದರೂ ಈವರೆಗೂ ಪೂರ್ಣಗೊಂಡಿಲ್ಲ. ಆದರೆ, ಶೇ. 80 ರಷ್ಟು ಕಾಮಗಾರಿ ಪೂರ್ಣಗೊಳಿಸಿರುವುದಾಗಿ ಹೇಳಿ ದುಪ್ಪಟ್ಟು ಟೋಲ್ ವಸೂಲಿ ಮಾಡುತ್ತಿರುವುದಕ್ಕೆ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಇತ್ತೀಚೆಗೆ ಐಆರ್ಬಿ ಹಾಗೂ ಎನ್ಎಚ್ಎಐ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು.
ಅಲ್ಲದೇ ಜಿಲ್ಲಾಧಿಕಾರಿಗೆ ಹೆದ್ದಾರಿ ಕಾಮಗಾರಿ ವಾಸ್ತವಿಕ ಸ್ಥಿತಿ ಮತ್ತು ಸಮಸ್ಯೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದರು. ಅದರಂತೆ ಇಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಐಆರ್ಬಿ, ಎನ್ಎಚ್ಎಐ ಅಧಿಕಾರಿಗಳು, ಪಿಡಬ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಖುದ್ದಾಗಿ ಕಾರವಾರದ ಮಾಜಾಳಿ ಗಡಿಯಿಂದ ಭಟ್ಕಳದ ಗಡಿವರೆಗೂ ಹೆದ್ದಾರಿಯಲ್ಲಿ ಬಸ್ ಮೂಲಕ ಸಂಚರಿಸಿ ಪರಿಶೀಲನೆ ನಡೆಸಿದರು.