ಕಾರವಾರ:ಗೋಕರ್ಣ ಕಡಲತೀರದಲ್ಲಿನ ಕಸದ ಸಮಸ್ಯೆ ಮನಗಂಡಿರುವ ರಾಷ್ಟ್ರೀಯ ಹಸಿರು ನ್ಯಾಯಪೀಠ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕುಮಟಾ ಪಟ್ಟಣ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಮಾಡಿದೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಮತ್ತು ಐತಿಹಾಸಿಕ ಧಾರ್ಮಿಕ ಸ್ಥಳವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶ್ರೀ ಕ್ಷೇತ್ರ ಕೇವಲ ಧಾರ್ಮಿಕ ತಾಣ ಮಾತ್ರವಾಗಿರದೇ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಇಲ್ಲಿನ ಕಡಲತೀರಗಳು ದೇಶ, ವಿದೇಶಗಳ ಪ್ರವಾಸಿಗರ ಹಾಟ್ ಫೇವರೆಟ್ ಆಗಿವೆ. ಆದರೆ ಇಂತಹ ತಾಣದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ಈ ವಿಚಾರ ಈಗ ರಾಷ್ಟ್ರೀಯ ಹಸಿರು ನ್ಯಾಯಪೀಠದ ಕೆಂಗಣ್ಣಿಗೆ ಗುರಿಯಾಗಿದೆ.
ಶಿವನ ಆತ್ಮಲಿಂಗಲಿರುವ ಏಕೈಕ ಪುಣ್ಯಕ್ಷೇತ್ರ ಎನ್ನುವ ಖ್ಯಾತಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ರಾಜ್ಯ, ಹೊರರಾಜ್ಯಗಳಿಂದ ಗೋಕರ್ಣಕ್ಕೆ ಆಗಮಿಸುತ್ತಾರೆ. ಇಲ್ಲಿನ ಕಡಲತೀರಗಳೂ ಸಹ ಪ್ರವಾಸಿಗರ ಆಕರ್ಷಣೆಯ ತಾಣವಾಗಿದ್ದು, ವಿದೇಶಿಗರೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ನೋಟಿಸ್ ಜಾರಿಯಾಗಿರುವ ಬಗ್ಗೆ ಸ್ಥಳೀಯರಾದ ನಾಗರಾಜ ಹರಪ್ಪನಳ್ಳಿ ಮಾತನಾಡಿ, ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿರುವುದರ ಜೊತೆಗೆ ಅದರ ದುಷ್ಪರಿಣಾಮಗಳೂ ಸಹ ಉಂಟಾಗಿದೆ. ಹೀಗಾಗಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಆಡಳಿತಕ್ಕೆ ನೋಟಿಸ್ ನೀಡಿದೆ. ಇದರಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ ಎಂದು ಸ್ಪಷ್ಟವಾಗಿದೆ ಎಂದರು.
ನಾವು ಪ್ರವಾಸಿಗರನ್ನು ಮತ್ತು ಧಾರ್ಮಿಕ ಕ್ಷೇತ್ರದ ಹೆಸರನ್ನು ಉಳಿಸಿಕೊಳ್ಳಬೇಕು. ಇಲ್ಲಿನ ಕುಡ್ಲೆ ಬೀಚ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ, ಸ್ವಚ್ಛತೆಯನ್ನು ಕಾಪಾಡಲು ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತ ಕಾಳಜಿ ವಹಿಸಬೇಕು. ಇಲ್ಲವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬರುತ್ತದೆ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.