ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ನಾರಾಯಣ ಭಾಗವತ ಅವರು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಇಬ್ಬರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ.
ಮೂಲತಃ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದವರಾದ ನಾರಾಯಣ ಭಾಗವತ ಪ್ರಸ್ತುತ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎ., ಎಂ.ಇಡಿ. ಪದವೀಧರರಾಗಿರುವ ಇವರು ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ.
ನಾರಾಯಣ ಭಾಗವತರು, ಕಥೆ, ಕವನ ಹಾಗೂ ನಾಟಕ ರಚನೆ, ಚಿತ್ರಕಲೆ, ಸಂಗೀತ, ನಾಟಕ ನಿರ್ದೇಶನ ಮತ್ತು ಅಭಿನಯ, ಉಪನ್ಯಾಸ, ರಜಾಶಿಬಿರಗಳ ಸಂಘಟನೆ, ಪೇಪರ್ ಕ್ರಾಫ್ಟ್, ಹಾರ್ಮೋನಿಯಂ ವಾದನ, ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ, ಯಕ್ಷಗಾನ, ಕರಕುಶಲ ಕಲೆ, ವಾಸ್ತು ಜ್ಞಾನ ಸೇರಿದಂತೆ ಬಹುಮುಖ ಪ್ರತಿಭೆ ಹೊಂದಿದ್ದಾರೆ.
ಹಲವು ಗೌರವಗಳು:ಈ ಹಿಂದೆ ಜನಗಣತಿಯ ಉತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ನಟ, ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ, ನೇಶನ್ ಬ್ಯುಲ್ಡರ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಾಲೂಕು ಪ್ರಶಸ್ತಿ, ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಭಾಗ್ವತ್ ಅವರಿಗೆ ಹತ್ತಾರು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಹಲವು ಸಂಘ, ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಇದೀಗ ನಾರಾಯಣ ಭಾಗವತರ ಮುಡಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಕಿರೀಟ ದೊರೆತಂತಾಗಿದೆ.
ಸೆಪ್ಟೆಂಬರ್ 05ರ ಶಿಕ್ಷಕರ ದಿನಾಚರಣೆಯಂದು ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ನಡೆಯಲಿದೆ.
ಇದನ್ನೂ ಓದಿ:ಏಣಿ ಹತ್ತಿ ಶಾಲೆ ಮೇಲೇರಿದ ಶಾಸಕ.. ಶಿಥಿಲಾವಸ್ಥೆಯ ಶಾಲೆಗೆ ಪಟಾಪಟ್ ಕಾಯಕಲ್ಪ!