ಕಾರವಾರ: ನಗರದಿಂದ 8 ಕಿ.ಮೀ. ದೂರದ ಸಮುದ್ರದ ಮಧ್ಯದ ಕೂರ್ಮಗಡ ದ್ವೀಪದಲ್ಲಿ ನರಸಿಂಹಸ್ವಾಮಿ ದೇವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಬೋಟ್ನಲ್ಲಿ ತೆರಳಿ ನರಸಿಂಹಸ್ವಾಮಿ ದರ್ಶನ ಪಡೆದ ಭಕ್ತರು ತಾಲೂಕಿನ ಕಡವಾಡದಲ್ಲಿ ನೆಲೆಸಿರುವ ನರಸಿಂಹಸ್ವಾಮಿ ವಿಗ್ರಹವನ್ನು ಭಕ್ತರು ಬೋಟ್ ಮೂಲಕ ಕೂರ್ಮಗಡ ದ್ವೀಪಕ್ಕೆ ತಂದು ಪೂಜೆ ಸಲ್ಲಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ವರ್ಷ ಪೂರ್ತಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರು ತಮಗೆ ತೂಫಾನ್ ವೇಳೆ ಸಮಸ್ಯೆ ಎದುರಾಗಬಾರದು. ವರ್ಷ ಪೂರ್ತಿ ಒಳ್ಳೆಯ ಮೀನುಗಳು ಬಲೆಗೆ ಬೀಳುವಂತೆ ಹರಕೆ ಕಟ್ಟಿರುತ್ತಾರೆ.
ಕಟ್ಟಿದ ಹರಕೆಯಂತೆ ವರ್ಷ ಪೂರ್ತಿ ಮೀನುಗಾರರಿಗೆ ಒಳ್ಳೆಯದಾದರೆ ದೇವರ ಜಾತ್ರೆಗೆ ಬಂದು ಬಾಳೆ ಗೊನೆಗಳು, ಹಣ್ಣು-ಕಾಯಿ ಪಂಚಕಜ್ಜಾಯವನ್ನು ಹರಕೆಯಂತೆ ಸಲ್ಲಿಸುತ್ತಾರೆ. ದೋಣಿ ದುರಂತ, ಕೊರೊನಾ ಕಾರಣದಿಂದಾಗಿ ಜಿಲ್ಲಾಡಳಿತ ಜಾತ್ರೆಗೆ ತೆರಳಲು ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಜಾತ್ರೆಗೆ ಬರುವವರ ಸಂಖ್ಯೆ ಸಹ ಕಡಿಮೆಯಾಗಿತ್ತು. ಆದರೆ ಸುರಕ್ಷತೆಯೊಂದಿಗೆ ಜಾತ್ರೆಗೆ ಆಗಮಿಸಿ ಸಖತ್ ಎಂಜಾಯ್ ಮಾಡಿದ್ದೇವೆ ಎನ್ನುತ್ತಾರೆ ಭಕ್ತರು.
ಇನ್ನು ಎರಡು ವರ್ಷದ ಹಿಂದೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ವಾಪಾಸ್ ಆಗುತ್ತಿದ್ದ ಬೋಟ್ ಮುಳಗಿ 16 ಜನರು ಮೃತಪಟ್ಟಿದ್ದರು. ಈ ಕಾರಣದಿಂದಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಭಾರಿ ಮುಂಜಾಗ್ರತೆ ಕೈಗೊಂಡಿತ್ತು.