ಕಾರವಾರ :2018 ಡಿಸೆಂಬರ್‌ನಲ್ಲಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಇದೀಗ ಮಹಾರಾಷ್ಟ್ರದ ಮಲ್ವಾನ್ ಕಡಲತೀರದ ಬಳಿ ಪತ್ತೆಯಾಗಿದ್ದು, ಬಹುತೇಕ ಎಲ್ಲ ಮೀನುಗಾರರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಉಡುಪಿಯ ಮಲ್ಪೆಯಿಂದ 2018 ರ ಡಿ. 13 ರಂದು ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಪ್ರಕರಣ ರಾಜ್ಯದಲ್ಲಿಯೇ ತೀವ್ರ ಸಂಚಲನ ಸೃಷ್ಟಿಸಿತ್ತು. ಬೋಟ್ ನಲ್ಲಿದ್ದ ಉತ್ತರಕನ್ನಡ ಜಿಲ್ಲೆಯ ಐವರು ಹಾಗೂ ಮಲ್ಪೆಯ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದರು. ಬೋಟ್ ಮಹಾರಾಷ್ಟ್ರದ ಸಿಂದುದುರ್ಗದ ಬಳಿ ಸಂಪರ್ಕ ಕಳೆದುಕೊಂಡಿದ್ದರಿಂದ ಆ ಸ್ಥಳ ಸೇರಿದಂತೆ ಕರಾವಳಿಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು.
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ, ಬೋಟ್ ಪತ್ತೆ ಮಾಡುವಲ್ಲಿ ಯಶಸ್ವಿಯಾದ ನೌಕಾಸೇನೆ ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ ಮೀನುಗಾರರು, ಪತ್ತೆಗಾಗಿ ಒತ್ತಾಯಿಸಿದ್ದರು. ಅಲ್ಲದೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಉಡುಪಿಯಲ್ಲಿ ಮೀನುಗಾರರ ಮನೆಗೆ ಭೇಟಿ ನೀಡಿದ ವೇಳೆ ಮೀನುಗಾರರನ್ನು ಪತ್ತೆಗೆ ಕೊಂಡುಯ್ಯುವಂತೆ ಒತ್ತಾಯಿಸಿದ್ದರು. ಅದರಂತೆ ಎಪ್ರಿಲ್ 28 ರಂದು ಉಡುಪಿಯ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ 9 ಜನ ಮೀನುಗಾರರು ನೌಕಾದಳದ ಸಿಬ್ಬಂದಿಗಳ ಜೊತೆ ಐಎನ್ಎಸ್ ನಿರೀಕ್ಷಕ ಮೂಲಕ ತೆರಳಿ ಇದೀಗ ವಾಪಸ್ ಆಗಿದ್ದಾರೆ.
ಮೀನುಗಾರರ ಪತ್ತೆ ಕಾರ್ಯದ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಮಾಹಿತಿ ನೀಡಿದ್ದು, ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಿಂದ ಏಪ್ರಿಲ್ 28 ರಂದು ಐಎನ್ಎಸ್ ನಿರೀಕ್ಷಕ ಮೂಲಕ ಬೋಟ್ ಪತ್ತೆಗೆ ನೌಕಾನೆಲೆ ಅಧಿಕಾರಿಗಳ ಜತೆ ಒಟ್ಟು 9 ಜನರು ತೆರಳಿದ್ದೇವು. ಬೋಟ್ ಸಂಪರ್ಕ ಕಳೆದುಕೊಂಡಿದ್ದ ಮಹರಾಷ್ಟ್ರದ ಸಿಂಧುದುರ್ಗದ ಆಳಸಮುದ್ರದ ಸುತ್ತಮುತ್ತ ಎರಡು ದಿನಗಳ ಕಾಲ ಸೋನಾರ್ ತಂತ್ರಜ್ಞಾನ ಬಳಸಿ ನಿರಂತರವಾಗಿ ಹುಡುಕಾಟ ನಡೆಸಲಾಗಿತ್ತು.
ಮೂರನೇ ದಿನ ಮಾಲ್ವನ್ ಎಂಬಲ್ಲಿ 60 ಮೀಟರ್ ಆಳದಲ್ಲಿ ಬೋಟಿನ ಅವಶೇಷವೊಂದು ಪತ್ತೆಯಾಗಿತ್ತು. ಅದು ಸುವರ್ಣ ತ್ರಿಭುಜದ ಬೋಟ್ ಎಂಬುದನ್ನು ತಿಳಿಯಲು ಆಳಸಮುದ್ರದಲ್ಲಿ ಕ್ಯಾಮರಾ ಬಿಡಲಾಗಿತ್ತು. ಇದರ ಸಂಪೂರ್ಣ ಲೈವ್ ಮೀನುಗಾರ ಕುಟುಂಬದವರು ಹಾಗೂ ನಾವು ನೋಡಿದ ಬಳಿಕ ಅದು ಸುವರ್ಣ ತ್ರಿಭುಜದ ಬೋಟ್ ಎನ್ನುವುದು ಖಚಿತವಾಗಿತ್ತು. ಬಳಿಕ ಮರುದಿನ ನೌಕಾಸೇನೆಯ ಪರಿಣಿತ ಡೈವರ್ಸ್ ಗಳನ್ನು ನೀರಿನಾಳಕ್ಕೆ ಇಳಿಸಿ ಪರಿಶೀಲನೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ನೌಕಾಸೇನೆಯ ಸಂಪರ್ಕಧಿಕಾರಿ ಮಾಹಿತಿ ಟ್ವೀಟ್ ಕೂಡ ಮಾಡಿದ್ದಾರೆ.
ಇನ್ನು ಬೋಟ್ ಪತ್ತೆ ಮಾಡುವಲ್ಲಿ ಯಶಸ್ವಿಯಾದ ನೌಕಾಸೇನೆ ಅಧಿಕಾರಿಗಳಿಗೂ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೂ ಈ ವೇಳೆ ಧನ್ಯವಾದ ಸಲ್ಲಿಸುತ್ತೇವೆ. ಅಲ್ಲದೆ ಈ ಬಗ್ಗೆ ಸಂಸದರ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿ ಮೀನುಗಾರರ ಕುಟುಂಬದವರಿಗೆ ಪರಿಹಾರ ಕೊಡಿಸುವಲ್ಲಿ ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ.