ಭಟ್ಕಳ:ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ, ಕಳೆದ ಎರಡೂವರೆ ತಿಂಗಳಿನಿಂದ ಮುಚ್ಚಿದ್ದ ಪ್ರಸಿದ್ಧ ಮುರುಡೇಶ್ವರ ಶಿವನ ದೇವಾಲಯವನ್ನು ಇಂದು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದೆ.
ದೇಗುಲಗಳ ಬಾಗಿಲು ಸೋಮವಾರದಿಂದ ತೆರೆಯುವ ಸುದ್ದಿ ತಿಳಿದು ಭಕ್ತರ ಮನಸ್ಸಿನಲ್ಲಿ ಧನ್ಯತಾಭಾವ ಮೂಡಿದ್ದು, ದೇವಾಲಯದ ಬಳಿ ಬಂದು ಬಾಗಿಲ ಬಳಿಯೇ ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡಿ ಒಳ ಪ್ರವೇಶಿಸುತ್ತಿದ್ದರು.
ಮುರ್ಡೇಶ್ವರದ ಶಿವನ ದೇವಾಲಯ ಬೆಳಗ್ಗೆ 7:30 ಕ್ಕೆ ಬಾಗಿಲು ತೆರೆದಿದೆ. ಮಾಸ್ಕ್ ಇಲ್ಲದೆ ದೇವರ ದರ್ಶನಕ್ಕೆ ಬಂದರೆ ಅಂಥವರನ್ನು ದೇಗುಲದ ಪ್ರವೇಶ ದ್ವಾರದಿಂದಲೇ ಹೊರ ಕಳುಹಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೇ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.