ಕಾರವಾರ:ಆರ್ ಎನ್ ಎಸ್ ಸಮೂಹ ಸಂಸ್ಥೆಗಳ ಸ್ಥಾಪಕ, ಮುರುಡೇಶ್ವರದ ನಿರ್ಮಾತೃ ಆರ್.ಎನ್. ಶೆಟ್ಟಿ (92) ಇಂದು ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದಾರೆ. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಆರ್ಎನ್ಎಸ್ ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕರಾಗಿ, ಸಮಾಜಮುಖಿ ಚಿಂತಕರಾಗಿ ಗುರುತಿಸಿಕೊಂಡಿದ್ದ ಅವರು ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಕ್ಷೇತ್ರ ಮುರುಡೇಶ್ವರ ಅಭಿವೃದ್ಧಿ ಪಡಿಸಿದ್ದಾರೆ. ಅಷ್ಟೇ ಅಲ್ಲದೆ 249 ಅಡಿ ಎತ್ತರದ ಭವ್ಯ ಗೋಪುರ ಮತ್ತು ಬೆಟ್ಟದ ಮೇಲೆ 123 ಅಡಿ ಎತ್ತರದ ಶಿವನ ಮೂರ್ತಿಯನ್ನು ಸ್ಥಾಪಿಸಿ ಕ್ಷೇತ್ರವನ್ನು ಪುಣ್ಯ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಯೂ ಪರಿವರ್ತಿಸಿದ್ದಾರೆ.
ಅನೇಕ ನಿರ್ಮಾಣ ಕಾರ್ಯಗಳು :
ಆರ್ಎನ್ ಶೆಟ್ಟಿ ಅವರು ಉದ್ಯಮಿಯಾಗಿ ಬಹುದೊಡ್ಡ ಹೆಸರು ಮಾಡಿದ್ದಾರೆ. 1961ರಲ್ಲಿ ಪಾಲುದಾರ ಕಂಪೆನಿಯಾದ ಆರ್ಎನ್ ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿದ್ದರು. ಕಂಪೆನಿ ಮೂಲಕ ಅನೇಕ ಸೇತುವೆ, ಅಣೆಕಟ್ಟುಗಳು, ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ.
ಜಲಾಶಯ, ಸುರಂಗ, ಹೆದ್ದಾರಿ ನಿರ್ಮಾಣ :
ವಾರಾಹಿ ಜಲವಿದ್ಯುತ್ ಯೋಜನೆ, ಮಾಣಿ ಅಣೆಕಟ್ಟು, ಗೇರುಸೊಪ್ಪ ಜಲಾಶಯ, ಸೂಪ ಜಲಾಶಯ, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಅವರು ತಮ್ಮ ಮೂಲಸೌಕರ್ಯ ಕಂಪನಿಯ ಮೂಲಕ ಅನೇಕ ನಿರ್ಮಾಣ ಕಾರ್ಯಗಳನ್ನು ನಡೆಸಿದ್ದರು.
ಶಿಕ್ಷಣೋದ್ಯಮಿಯೂ ಹೌದು :
ಮೋಟಾರ್ಸ್ ಕಂಪನಿ, ಫೈನಾನ್ಸ್ ಕಂಪನಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದಾರೆ. ಅವರ ಆರ್ ಎನ್ ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಕರ್ನಾಟಕದ ಅತಿ ದೊಡ್ಡ ಕ್ಯಾಂಪಸ್ ಎನಿಸಿಕೊಂಡಿದೆ. ಶೆಟ್ಟಿ ಟ್ರಸ್ಟ್ ವತಿಯಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಅವರ ಈ ಅಸಾಧಾರಣ ಸೇವೆಗೆ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದ ಕೈಗಾರಿಕಾ ರತ್ನ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಸಂದಿವೆ.