ಭಟ್ಕಳ: ದೇಶಾದ್ಯಂತ ಲಾಕ್ಡೌನ್ ಸಡಿಲಿಕೆ ನಂತರ ನಾಳೆಯಿಂದ ದೇಶದ ಧಾರ್ಮಿಕ ಕೇಂದ್ರಗಳನ್ನು ಸಾರ್ವಜನಿಕ ದರ್ಶನಕ್ಕಾಗಿ ಪುನಃ ತೆರೆಯುವ ಸಿದ್ಧತೆ ನಡೆಯುತ್ತಿವೆ.
ಈ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನ ತೆರೆಯಲಿದ್ದು,ಔಷಧ ಸಿಂಪಡಣೆ ಮಾಡಿ ಭಕ್ತರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕಳೆದ ಮಾರ್ಚ್ 20ರಿಂದ ಮುರುಡೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿತ್ತು. ಮುಂಜಾನೆ 7.30 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ 3 ಗಂಟೆಯಿಂದ ಸಂಜೆ 6.45 ವರೆಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಈ ಬಗ್ಗೆ ದೇವಸ್ಥಾನ ಧರ್ಮದರ್ಶಿ ಶ್ರೀಪಾದ ಕಾಮತ್ ಮಾತನಾಡಿ ಸರ್ಕಾರದ ಆದೇಶದಂತೆ ಮುರುಡೇಶ್ವರ ದೇವಸ್ಥಾನ ತೆರೆಯಲು ತೀರ್ಮಾನಿಸಿದ್ದೇವೆ.ಇದಕ್ಕೆ ಬೇಕಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಕೈಗೊಳ್ಳಲಾಗಿದೆ.
ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಬಾಕ್ಸ್ ಹಾಕಲಾಗಿದೆ. ಮಧ್ಯಾಹ್ನ ತೀರ್ಥಪ್ರಸಾದ ವಿತರಣೆ ಹಾಗೂ ಯಾವುದೇ ಸೇವೆಗಳು ಇರುವದಿಲ್ಲ. ಅದಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಸಹಕರಿಸಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.