ಭಟ್ಕಳ (ಉ.ಕ):ರಾಜ್ಯದಲ್ಲಿ ಇಂದಿನಿಂದ ದೇಗುಲಗಳ ಬಾಗಿಲು ತೆಗೆಯಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಕೇಂದ್ರದ ಆದೇಶ ಹೊರ ಬೀಳುತ್ತಿದ್ದಂತೆ ತಾಲೂಕಿನಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಮುಚ್ಚಿದ್ದ ದೇವಾಲಯಗಳು ಬಾಗಿಲು ತೆರೆದಿವೆ.
ಮುರುಡೇಶ್ವರ ದೇಗುಲದ ಬಾಗಿಲು ಓಪನ್: ಶಿವ ಭಕ್ತರಿಲ್ಲದೆ ಗುಡಿ ಖಾಲಿ ಖಾಲಿ ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವದಲ್ಲಿ ಮೊದಲ ದಿನ ಭಕ್ತರೇ ಆಗಮಿಸಿಲ್ಲ. ತಾಲೂಕಿನ ಪ್ರಸಿದ್ಧ ದೇವಾಲಯವಾದ ಮುರುಡೇಶ್ವರದ ಶಿವನ ದೇವಲಾಯ ಬೆಳಗ್ಗೆ 7:30ಕ್ಕೆ ಬಾಗಿಲು ತೆರೆದಿದೆ. ದೇಗುಲದ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ರೀನಿಂಗ್ ಹಿಡಿದು ದೇವಸ್ಥಾನದ ಸಿಬ್ಬಂದಿ ನಿಂತಿದ್ದು, ದೇವಾಲಯದಲ್ಲಿ ಸಾಮಾಜಿಕ ಅಂತರ ಪಾಲಿಸಲು ಸಾಲಿನಲ್ಲಿ ಮಾರ್ಕ್ ಮಾಡಲಾಗಿದೆ.
ಆದರೆ, ದೇವಾಲಯದ ಪ್ರಾಂಗಣದಲ್ಲಿ ದರ್ಶನಕ್ಕಾಗಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಬಂದಿದ್ದಾರೆ. ದೇವಾಲಯದ ಹೊರಾಂಗಣದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶವಿರಲಿಲ್ಲ. ಕೇಂದ್ರದ ಮಾರ್ಗಸೂಚಿಯಂತೆ ದರ್ಶನಕ್ಕಷ್ಟೇ ಭಕ್ತರಿಗೆ ಅವಕಾಶ ನೀಡಲಾಗಿದೆ. ಪೂಜೆ, ಸೇವೆ ಆರತಿ, ಪ್ರಸಾದ ತೀರ್ಥಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈಗಾಗಲೇ ದೇವಾಲಯಗಳನ್ನು ಶುಚಿಗೊಳಿಸಲಾಗಿದ್ದು, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಿಲಾಗಿದೆ. ತಾಲೂಕಿನಲ್ಲೇ ಪ್ರಸಿದ್ಧ ದೇಗುಲ ಎನಿಸಿರುವ ಶಿವನ ದೇವಾಲಯದಲ್ಲಿ ಆಡಳಿತ ಮಂಡಳಿ ಈಗಾಗಲೇ ಸಕಲ ಸಿದ್ಧತೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಈಶ್ವರ ನಾಯ್ಕ ದೊಡ್ಮನೆ, ಕೊರೊನಾಗೆ ಸಂಬಂಧಿಸಿದಂತೆ ದೇವಸ್ಥಾನದ ಬಾಗಿಲುಗಳನ್ನು ಕೇಂದ್ರ ಸರ್ಕಾರದ ಆದೇಶದಂತೆ ಕಳೆದೆರಡು ತಿಂಗಳಿಂದ ಮುಚ್ಚಲಾಗಿತ್ತು. ಇಂದು ದೇವಸ್ಥಾನ ತೆರೆಯಲಾಗಿದೆ. ದಿನಂಪ್ರತಿ ಬಂದು ಶಿವನಿಗೆ ಕೈ ಮುಗಿದು ಹೋಗುತ್ತಿದ್ದ ನಾವು ಮನೆಯಲ್ಲೇ ಶಿವನ ನೆನಪಿಸಿಕೊಂಡು ಸ್ಮರಿಸುತ್ತಿದ್ದೆವು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ದರ್ಶನ ಪಡೆಯಬೇಕು ಎಂದರು.