ಕರ್ನಾಟಕ

karnataka

ETV Bharat / state

ಬೆಳ್ಳಕ್ಕಿಗಳ ಸಂತಾನೋತ್ಪತ್ತಿ ತಾಣ ಶಿರಸಿಯ ಮುಂಡಿಗೆಕೆರೆ : ಇಲ್ಲಿ ಸಿಗುತ್ತದೆ ಮಳೆಗಾಲದ ಮುನ್ಸೂಚನೆ - Mundigekare of Shirsi is The breeding ground of herons

ಪ್ರತಿವರ್ಷದ ಮಳೆಗಾಲ ಆರಂಭಕ್ಕೆ ಶಿರಸಿಯ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಸಂತಾನೋತ್ಪತ್ತಿಗಾಗಿ ಬೆಳ್ಳಕ್ಕಿಗಳು ಬರುತ್ತದೆ. ಬೆಳ್ಳಕ್ಕಿಗಳು ಇಲ್ಲಿಗೆ ಬಂದವೆಂದರೆ ಮಾನ್ಸೂನ್ ಆರಂಭದ ಮುನ್ಸೂಚನೆ ನೀಡುತ್ತವೆ ಎಂಬ ನಂಬಿಕೆ ಇದೆ.

mundigekare-of-shirsi-is-the-breeding-ground-of-herons
ಬೆಳ್ಳಕ್ಕಿಗಳ ಸಂತಾನೋತ್ಪತ್ತಿ ತಾಣ ಶಿರಸಿಯ ಮುಂಡಿಗೆಕರೆ : ಇಲ್ಲಿ ಸಿಗುತ್ತದೆ ಮಳೆಗಾಲದ ಮುನ್ಸೂಚನೆ !

By

Published : Jul 5, 2022, 5:14 PM IST

ಶಿರಸಿ :ಇಲ್ಲಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಇದೀಗ ಸಂಭ್ರಮವೋ ಸಂಭ್ರಮ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಮುಂಡಿಗೇಕೆರೆ ಪಕ್ಷಿಧಾಮ. ಸುತ್ತಲೂ ಗುಡ್ಡಗಳಿಂದ ಆವೃತವಾಗಿ, ಬೃಹತ್ ಮುಂಡಿಗೆ ಗಿಡಗಳಿಂದ ಕೂಡಿದ ಮುಂಡಿಗೆಕೆರೆ ಈಗ ಅಕ್ಷರಶಃ ನಿಸರ್ಗ ನಿರ್ಮಿತ ಸೌಂದರ್ಯದಿಂದ ಹಲವು ಪ್ರಬೇಧದ ಪಕ್ಷಿಗಳಿಗೆ ಸಂತಾನೋತ್ಪತ್ತಿಯ ತಾಣವಾಗಿ ಮಾರ್ಪಟ್ಟಿದೆ.

ಬೆಳ್ಳಕ್ಕಿಗಳ ಸಂತಾನೋತ್ಪತ್ತಿ ತಾಣ ಶಿರಸಿಯ ಮುಂಡಿಗೆಕರೆ : ಇಲ್ಲಿ ಸಿಗುತ್ತದೆ ಮಳೆಗಾಲದ ಮುನ್ಸೂಚನೆ

ಹೌದು, ಪ್ರತೀ ವರ್ಷ ಮಳೆಗಾಲದ ಆರಂಭಕ್ಕೆ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಇಲ್ಲಿಗೆ ಬಂದು ತಮ್ಮ ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುವ ಪರಿಪಾಠ ನಡೆದುಕೊಂಡು ಬಂದಿದೆ. ಇಲ್ಲಿಗೆ ಬೆಳ್ಳಕ್ಕಿಗಳು ಆಗಮಿಸಿದವು ಎಂದರೆ ಅದು ಮಾನ್ಸೂನ್ ಮುನ್ಸೂಚನೆ ಎಂದರ್ಥ. ಇಲ್ಲಿನ ಸಹ್ಯಾದ್ರಿಯ ಮಡಿಲಲ್ಲಿ, ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ನಡುವೆ ಪಕ್ಷಿಗಳು ಇಲ್ಲಿ ಗೂಡು ಕಟ್ಟುತ್ತದೆ. ಸುಮಾರು 6 ಪ್ರಬೇಧದ ಹಕ್ಕಿಗಳು ಇಲ್ಲಿ ತಮ್ಮ ಸಂತಾನೋತ್ಪತ್ತಿಗಾಗಿ ಬರುತ್ತಿದ್ದು, 1980 ರ ದಶಕದಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ಪಿ.ಡಿ ಸುದರ್ಶನ್ ಅಜ್ಞಾತವಾಗಿದ್ದ ಈ ಪಕ್ಷಿಧಾಮವನ್ನು ಹೊರ ಜಗತ್ತಿಗೆ ಪರಿಚಯಿಸಿದರು. 1995 ರಿಂದ ಜಾಗೃತ ವೇದಿಕೆ ಸೋಂದಾ (ರಿ.,) ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ ಇದರ ಸಂರಕ್ಷಣೆ ಮಾಡುತ್ತ ಬಂದಿದೆ.

2019-20 ರಲ್ಲಿ ಸೋಂದಾ ಗ್ರಾಮ ಪಂಚಾಯತ್ ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಲಹೆಯಂತೆ ಮುಂಡಿಗೆಕೆರೆ ಪಕ್ಷಿಧಾಮವನ್ನು “ಪಾರಂಪರಿಕ ಜೀವ ವೈವಿಧ್ಯ ತಾಣ” ಎಂದು ಅಧಿಕೃತವಾಗಿ ಘೋಷಿಸಿದರು. ಇದರ ಜೊತೆಗೆ ಮಳೆಗಾಲದಲ್ಲಿ ಸಂತಾನೋತ್ಪತ್ತಿಗೆ ಬರುವ ಪಕ್ಷಿಗಳಿಗೆ ಅರಣ್ಯ ಇಲಾಖೆಯು 2003 ರಿಂದ ಕಾವಲುಗಾರರನ್ನು ನೇಮಿಸಿ ಇವುಗಳನ್ನು ರಕ್ಷಿಸುತ್ತಾ ಬಂದಿದೆ. ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೆಕೆರೆಗೆ ನಿರ್ದಿಷ್ಟ ಸಮಯದಲ್ಲಿ ತಮ್ಮ ಸಂತಾನಾಭಿವೃದ್ಧಿಗಾಗಿ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವುದು ಅತ್ಯಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತಾಗಿ ಕ್ರಮ ಕೈಗೊಂಡು ಕಾವಲುಗಾರರನ್ನು ನೇಮಿಸಿ ಪಕ್ಷಿಗಳಿಗೆ ರಕ್ಷಣೆ ನೀಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.‌

ಒಟ್ಟಾರೆಯಾಗಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪಿರುವ ಈ ಸಂದರ್ಭದಲ್ಲಿ ಇಂತಹ ಕೆರೆಗಳನ್ನು ರಕ್ಷಿಸಿ ಉಳಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಈ ಕೆರೆ ಸುತ್ತ ಮುತ್ತ ಸಹಸ್ರಲಿಂಗ, ಸೋದೆ ವಾದಿರಾಜ ಮಠ, ಸ್ವಾದಿ ಜೈನ ಮಠ ಸೇರಿ ಹಲವು ಧಾರ್ಮಿಕ ಕೇಂದ್ರಗಳೂ, ಜಲಪಾತಗಳೂ ಇದ್ದು, ಪ್ರವಾಸಿಗರಿಗೆ ಮುಂಡಿಗೆ ಕೆರೆಯೂ ವಿಶೇಷ ಸ್ಥಳವಾಗಿದೆ.

ಓದಿ :ನೂಪುರ್ ಶರ್ಮಾ ಪ್ರಕರಣ: ಚೀಫ್ ಜಸ್ಟಿಸ್ ಎನ್​ವಿ ರಮಣರಿಗೆ ನಿವೃತ್ತ ನ್ಯಾಯಾಧೀಶರ ಪತ್ರ

ABOUT THE AUTHOR

...view details