ಕರ್ನಾಟಕ

karnataka

ETV Bharat / state

ಕಾರವಾರ: ಕೆಸರಲ್ಲಿ ಓಟ, ಹಗ್ಗಜಗ್ಗಾಟ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾರ್ಗಾ ಗ್ರಾಮದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕಾರವಾರದ ಖಾರ್ಗಾದಲ್ಲಿ ಕೆಸರುಗದ್ದೆ ಕ್ರೀಡಾಕೂಟ
ಕಾರವಾರದ ಖಾರ್ಗಾದಲ್ಲಿ ಕೆಸರುಗದ್ದೆ ಕ್ರೀಡಾಕೂಟ

By

Published : Aug 14, 2023, 7:06 PM IST

Updated : Aug 16, 2023, 12:45 PM IST

ಕಾರವಾರದ ಖಾರ್ಗಾದಲ್ಲಿ ಕೆಸರುಗದ್ದೆ ಕ್ರೀಡಾಕೂಟ

ಕಾರವಾರ : ಅತಿಯಾದ ಮೊಬೈಲ್ ಬಳಕೆಯಿಂದಾಗಿ ಇಂದು ಗ್ರಾಮೀಣ ಕ್ರೀಡಾಕೂಟಗಳು ಮರೆಯಾಗುತ್ತಿವೆ ಎಂಬ ಬೇಸರ ಆಗಾಗ್ಗೆ ಕೇಳಿಬರುತ್ತಿದೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಕೃಷಿ ಚಟುವಟಿಕೆ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಪ್ರೋತ್ಸಾಹಿಸುವ ಸಂಬಂಧ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಎಲ್ಲರ ಗಮನ ಸೆಳೆಯಿತು.

ಸುತ್ತಲೂ ಹಸಿರಿನಿಂದ ಕಂಗೊಳಿಸುವ ಪ್ರದೇಶದಲ್ಲಿ ಹಸನುಗೊಳಿಸಿದ ಗದ್ದೆ, ಉತ್ಸಾಹದಿಂದ ಹಲವು ರೀತಿಯ ಕೆಸರಾಟಗಳಲ್ಲಿ ಭಾಗವಹಿಸುವ ಜನರು, ಕೆಸರಲ್ಲಿ ಓಡುವ, ಆಡುವ ಭರದಲ್ಲಿ ಬಿದ್ದೇಳುವ ಕ್ರೀಡಾಪಟುಗಳನ್ನು ನೋಡಿ ಉದ್ಗರಿಸುವ ಪ್ರೇಕ್ಷಕರು... ಇಂಥ ದೃಶ್ಯಗಳು ಕಂಡುಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾರ್ಗಾ ಗ್ರಾಮದಲ್ಲಿ.

ಚಮಚದಲ್ಲಿ ಲಿಂಬೆ ಹಣ್ಣಿಟ್ಟು ಕೆಸರಿನಲ್ಲಿ ಓಟ ಸ್ಪರ್ಧೆ

ಕೆಸರು ಗದ್ದೆ ಕ್ರೀಡಾಕೂಟಕ್ಕಂತಲೇ ಕ್ರೀಡೂಕೂಟ ನಡೆಯುವ ಸ್ಥಳವನ್ನು ಮಧುವಣಗಿತ್ತಿಯಂತೆ ಸಜ್ಜುಗೊಳಿಸಲಾಗಿತ್ತು. ತಳಿರು ತೋರಣಗಳೊಂದಿಗೆ ವಿಶಾಲವಾದ ಗದ್ದೆಯನ್ನು ಹದ ಮಾಡಿ ಕೆಸರಿನಿಂದ ಸಿದ್ಧಗೊಳಿಸಲಾಗಿತ್ತು. ಇದರಲ್ಲಿ ಮಹಿಳೆಯರು, ಮಕ್ಕಳೆನ್ನದೆ ಎಲ್ಲರೂ ದಿನವಿಡೀ ಮೈ ರಾಡಿಯನ್ನೂ ಲೆಕ್ಕಿಸದೇ ಕೆಸರಿನಲ್ಲಿ ಸಾಮರ್ಥ್ಯ ಪ್ರದರ್ಶಿಸಿದರು.

ಕೆಸರುಗದ್ದೆ ಓಟದ ಝಲಕ್!

ಈ ಕ್ರೀಡೆಯನ್ನು ಖಾರ್ಗಾ ಗ್ರಾಮಸ್ಥರು ಮತ್ತು ಪತ್ರಿಕಾ ನಿರ್ವಹಣಾ ಸಮಿತಿ ಆಯೋಜಿಸಿತ್ತು. ಹಳ್ಳಿಗಳಿಂದ ಜನರು ಪಟ್ಟಣದೆಡೆಗೆ ಆಕರ್ಷಿತರಾಗಿ ನೆಲೆಸಲು ತೆರಳುವುದರಿಂದ ನಿಜವಾದ ಹಳ್ಳಿಯ ಸೊಬಗು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಜನರಲ್ಲಿ ಹಳ್ಳಿಯ ಸೊಗಡು ಬಿಂಬಿಸುವ ಹಾಗೂ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ಕಾರ್ಯಕ್ರಮವನ್ನು ಮುಂದುವರಿಸುವ ಮೂಲಕ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವುದಾಗಿ ಆಯೋಜಕ ರವಿಕಾಂತ ತಿಳಿಸಿದ್ದಾರೆ.

ಕೆಸರುಗದ್ದೆ ಓಟದಲ್ಲಿ ಭಾಗವಹಿಸಿದ ಯುವಕರು

ಕೆಸರು ಗದ್ದೆಯಲ್ಲಿ ಓಟ, ಹಗ್ಗ ಜಗ್ಗಾಟ, ಚಮಚದಲ್ಲಿ ಲಿಂಬೆ ಹಣ್ಣನ್ನಿಟ್ಟು ಓಡುವುದು, ಕೆಸರಲ್ಲಿ ವ್ಹಾಲಿಬಾಲ್... ಹೀಗೆ ಹಲವು ಗ್ರಾಮೀಣ ಆಟಗಳನ್ನು ಮಕ್ಕಳು, ಯುವತಿಯರು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಡಿಸಲಾಯಿತು. ಇದೇ ಮೊದಲ ಬಾರಿಗೆ ಇಂತಹ ಕ್ರೀಡಾಕೂಟ ಖಾರ್ಗಾದಲ್ಲಿ ಜರುಗಿದ್ದರಿಂದ ಉತ್ಸಾಹದಿಂದ ಪಾಲ್ಗೊಂಡ ಜನತೆ ವಿಶಿಷ್ಠ ಅನುಭವ ಪಡೆದರು. ಅದರಲ್ಲೂ ಕೇವಲ ಮನೆಯಲ್ಲೇ ಇರುತ್ತಿದ್ದ ಇಲ್ಲಿನ ಮಹಿಳೆಯರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಖುಷಿಪಟ್ಟರು. ವಿಭಿನ್ನ ಕ್ರೀಡಾಕೂಟ ಆಯೋಜಿಸಿರುವುದರಿಂದ ಕ್ರೀಡಾಕೂಟ ನೋಡುವುದಕ್ಕಾಗಿಯೇ ಅಕ್ಕಪಕ್ಕದ ಹಳ್ಳಿಗಳಿಂದ ಸಾಕಷ್ಟು ಮಂದಿ ಆಗಮಿಸಿ, ಕೆಸರುಗದ್ದೆ ಕ್ರೀಡಾಕೂಟ ಕಣ್ತುಂಬಿಕೊಂಡರು. ಇದೇ ವೇಳೆ, ಊರ ಹಿರಿಯರು, ಮಾಜಿ ಸೈನಿಕರು ಹಾಗು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:ಕೊಡಗಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟದ ಸಂಭ್ರಮ: ಕುಣಿದು ಕುಪ್ಪಳಿಸಿದ ಕ್ರೀಡಾಭಿಮಾನಿಗಳು..Video

Last Updated : Aug 16, 2023, 12:45 PM IST

ABOUT THE AUTHOR

...view details