ಕಾರವಾರ: ತಾಂತ್ರಿಕತೆ, ವೈಜ್ಞಾನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳನ್ನೇ ಮರೆತಿರುವ, ಮೊಬೈಲ್ಗೆ ಜೋತು ಬಿದ್ದು ಅಂಗಳಕ್ಕಿಳಿಯಲೂ ಹಿಂದೆ ಮುಂದೆ ನೋಡುವ ಮಕ್ಕಳು, ಯುವಕರನ್ನು ಗ್ರಾಮೀಣ ಕ್ರೀಡೆಗಳತ್ತ ಆಕರ್ಷಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟವೊಂದು ಎಲ್ಲರ ಗಮನ ಸೆಳೆದಿದೆ.
ದೇವಳಮಕ್ಕಿಯಲ್ಲಿ ಇದೇ ಮೊದಲ ಬಾರಿಗೆ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇರವಡಿ, ದೇವಳಮಕ್ಕಿ, ವೈಲವಾಡ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ನೂರಾರು ಜನರು ಆಟವಾಡಿ ಸಂಭ್ರಮಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಓಟ ಮತ್ತು ಚಮಚ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಪುರುಷರಿಗೆ ಓಟ, ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗಾಗಿ ಓಟ, ಚಮಚ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೀಡಾಭಿಮಾನ ಮೆರೆದರು.