ಕಾರವಾರ: ದೇಶದ್ರೋಹಿಗಳಿಂದಲೇ ತುಂಬಿಕೊಂಡಿರುವ ಬಿಎಸ್ಎನ್ಎಲ್ ಸಂಸ್ಥೆಯನ್ನು ನಮ್ಮ ಸರ್ಕಾರದಿಂದಲೂ ಸರಿಪಡಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇದು ಸಂಪೂರ್ಣ ಖಾಸಗೀಕರಣಗೊಳ್ಳಲಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ - Anantkumar hegade latest news
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಸುದ್ದಿಯಾಗಿದ್ದಾರೆ. ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಎಸ್ಎನ್ಎಲ್ ದೇಶಕ್ಕೆ ಕಳಂಕವಾಗಿದೆ. ಇನ್ನು ಮುಂದೆ ಈ ಜಾಗಕ್ಕೆ ಖಾಸಗಿಯವರು ಎಂಟ್ರಿಕೊಡಲಿದ್ದಾರೆ. ಸಾಕಷ್ಟು ಪ್ರಯತ್ನಿಸಿದರೂ ನಮ್ಮ ಸರ್ಕಾರದಿಂದಲೂ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ. ಸರ್ಕಾರ ಹಣ, ತಂತ್ರಜ್ಞಾನ ಎಲ್ಲವನ್ನು ಕೊಟ್ಟರೂ ಕೂಡ ಈ ನೌಕರರು ಕೆಲಸ ಮಾಡುತ್ತಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರು ಮನೆಗೆ ತೆರಳಲಿದ್ದಾರೆ ಎಂದರು.
ಎಲ್ಲಾ ಸೌಕರ್ಯಗಳಿದ್ದರೂ ಬಿಎಸ್ಎನ್ಎಲ್ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ ಎಂದು ಸಂಸದ ಹೆಗಡೆ ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸುತ್ತಿದ್ದು, ಬಹುತೇಕ ಇದನ್ನು ಖಾಸಗೀಕರಣಗೊಳಿಸುತ್ತೇವೆ. ಏರ್ ಇಂಡಿಯಾ ಮತ್ತು ಬಿಎಸ್ಎನ್ಎಲ್ ಇವೆರಡೂ ನಮ್ಮ ಸರ್ಕಾರಕ್ಕೆ ಕೈಕೊಟ್ಟಿವೆ. ಕೆಲಸ ಮಾಡಬಾರದು ಎಂಬ ಮಾನಸಿಕತೆಯಿಂದಾಗಿ ಇಂತಹ ದುಸ್ಥಿತಿ ಬಂದಿದೆ ಎಂದು ಸಂಸದರು ಕಿಡಿಕಾರಿದ್ದಾರೆ.