ಶಿರಸಿ :ಬಾರೀ ಮಳೆಯಿಂದ ಹಾನಿಗೊಳಗಾದ ಉತ್ತರ ಕನ್ನಡದ ಸಿದ್ದಾಪುರದ ನೆರೆಪೀಡಿತ ಹೆಮ್ಮನಬೈಲ್, ಕಲ್ಯಾಣಪುರ ಪ್ರದೇಶಗಳಿಗೆ ಸಂಸದ ಅನಂತಕುಮಾರ್ ಹೆಗಡೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡಿದರು.
ಸಂಸದ ಅನಂತಕುಮಾರ್ ಹೆಗಡೆಯಿಂದ ನೆರೆಪೀಡಿತ ಪ್ರದೇಶಗಳ ವೀಕ್ಷಣೆ; ಕೇಂದ್ರದಿಂದ ಶೀಘ್ರ ಪರಿಹಾರದ ಭರವಸೆ - ಉತ್ತರ ಕನ್ನಡದ ಸಿದ್ದಾಪುರ
ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಉತ್ತರ-ಕನ್ನಡ ಜಿಲ್ಲೆಯ ಭಾಗದಲ್ಲಿ ಅನಾಹುತಗಳು ಸಂಭವಿಸಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಸಿದ್ದಾಪುರದ ನೆರೆ ಪೀಡಿತ ಹೆಮ್ಮನಬೈಲ್, ಕಲ್ಯಾಣಪುರ ಪ್ರದೇಶಗಳಿಗೆ ಸಂಸದ ಅನಂತಕುಮಾರ್ ಹೆಗಡೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು.
ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಹೆಗಡೆ, ಪೂರ್ತಿಯಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮನೆ ಅರ್ಧ ಹಾಳಾಗಿದ್ದಲ್ಲಿ ರಿಪೇರಿಗೆ 1 ಲಕ್ಷ ಹಾಗೂ ಮನೆಗೆ ನೀರು ನುಗ್ಗಿದ್ದಲ್ಲಿ 3,800 ರೂಪಾಯಿ ಪರಿಹಾರ ಧನವನ್ನು ತಕ್ಷಣಕ್ಕೆ ಘೋಷಿಸಿದ್ದು, ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಮಳೆಯಿಂದಾಗಿ ಇನ್ನು ಮುಂದೆಯೂ ಮನೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ, ಅದನ್ನೂ ಕೂಡ ಪಟ್ಟಿ ಮಾಡಿ ಅವರಿಗೂ ಪರಿಹಾರ ವಿತರಣೆ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಸರ್ಕಾರವಿಲ್ಲ ಅನ್ನೋದು ಸುಳ್ಳು. ಮುಖ್ಯಮಂತ್ರಿಗಳು ಒಬ್ಬರೇ ಇದ್ರೂ ಕೂಡ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ರಾಜಕೀಯ ಮಾಡೋ ಜಾಯಮಾನ ನಮ್ಮದಲ್ಲ. ಕೇಂದ್ರದಿಂದ ಒಂದೇ ಸಲ ಪರಿಹಾರ ಹಣವನ್ನ ಬಿಡುಗಡೆ ಮಾಡ್ತೀವಿ. ರಾಜ್ಯ ಸರ್ಕಾರ ಹಾನಿಯ ಸಮೀಕ್ಷೆಯ ಅಂದಾಜನ್ನು ಕಳಿಸಿದ ತಕ್ಷಣ ಕೇಂದ್ರದಿಂದ ಪರಿಹಾರ ಧನ ಬಿಡುಗಡೆಯಾಗುತ್ತೆ, ಯಾವುದೇ ಅನುಮಾನ ಬೇಡ ಎಂದರು.