ಭಟ್ಕಳ(ಉತ್ತರ ಕನ್ನಡ):ಮಾರ್ಚ್ 20ರ ಲಾಕ್ಡೌನ್ನಿಂದ ಈವರೆಗೆ 22 ಮಂದಿ ಸಾವನ್ನಪ್ಪಿರುವ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಸಂಸದ ಅನಂತ್‌ಕುಮಾರ್ ಹೆಗಡೆ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಭಟ್ಕಳಕ್ಕೆ ಆಗಮಿಸಿದ ಸಂಸದರು, ಕೋವಿಡ್-19 ಸಾಂಕ್ರಾಮಿಕ ರೋಗದ ತಡೆ ಕುರಿತಾಗಿ ತಹಶೀಲ್ದಾರ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಕಚೇರಿಯಲ್ಲಿ ಉಪಸ್ಥಿತರಿದ್ದ ಸಹಾಯಕ ಆಯುಕ್ತರು, ತಹಶೀಲ್ದಾರ್, ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿದರು. ಈಗಾಗಲೇ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಭಟ್ಕಳ ಕೊರೊನಾದಿಂದ ಮುಕ್ತವಾಗುವ ಹಂತದಲ್ಲಿರುವಾಗ ಇನ್ನೊಂದು ಪ್ರಕರಣ ಉಲ್ಭಣಗೊಂಡಿದೆ. ಅಧಿಕಾರಿಗಳು ಇನ್ನಷ್ಟು ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಿದೆ. ಪ್ರಮುಖವಾಗಿ ಪಟ್ಟಣ ವ್ಯಾಪ್ತಿಯಲ್ಲಿನ ಜನರ ಮನೆ ಮನೆಗೆ ಹೋಗಿ ಜನರ ಆರೋಗ್ಯದ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದು ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಟ್ಕಳಕೆ ಆಗಮಿಸಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಹೋಗುವ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಜನರು ಸಹಕರಿಸದೇ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದ ಸಂಸದರು, ಮಹಿಳಾ ಹಾಗೂ ಪುರುಷ ಪೊಲೀಸ್ ಸಿಬ್ಬಂದಿ ನೇಮಿಸಿ ಮಾಹಿತಿ ನಿರಾಕರಿಸುವವರನ್ನು ಮನೆಯಿಂದ ಹೊರಗೆ ಕರೆಯಿಸಿ ಅವರ ಆರೋಗ್ಯದ ಸಮೀಕ್ಷೆ ಮಾಡಿ ಎಂದಿದ್ದಾರೆ.
ತಾಲೂಕಿನಲ್ಲಿ ಸಾವನ್ನಪ್ಪುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಸಂಸದರು ಪ್ರಶ್ನಿಸಿದ್ದು, ತಾಲೂಕಿನಲ್ಲಿನ ಎಲ್ಲಾ ಮುಸ್ಲಿಂ ಸಮಾಧಿ(ಕಬರಸ್ಥಾನ)ದಲ್ಲಿ ದಿನಕ್ಕೆ ಶಿಫ್ಟ್‌ನಂತೆ ಎರಡು ಬೀಟ್ ಪೊಲೀಸರನ್ನು ನೇಮಿಸುವ ಕೆಲಸ ಮಾಡುವುದರೊಂದಿಗೆ ಇನ್ನು ಮುಂದೆ ಯಾವುದೇ ವ್ಯಕ್ತಿ ಸಾವನ್ನಪ್ಪಿದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಿ ಮೃತ ವ್ಯಕ್ತಿಯ ಸ್ಯಾಬ್ ಸಂಗ್ರಹಿಸಿ ಅವರ ವರದಿ ನೆಗೆಟಿವ್ ಬಂದ ಮೇಲೆ ಹೂಳಲು ಸೂಚನೆ ನೀಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಉತ್ತರಿಸಿದರು.
ಸಹಾಯಕ ಆಯುಕ್ತ ಭರತ ಎಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ್, ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ. ಶರದ ನಾಯಕ, ತಹಸೀಲ್ದಾರ್ ಎಸ. ರವಿಚಂದ್ರ, ಡಿವೈಎಸ್ಪಿ ಗೌತಮ್ ಕೆ.ಸಿ. ಸೇರಿದಂತೆ ಮುಂತಾದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.