ಕಾರವಾರ (ಉತ್ತರ ಕನ್ನಡ): ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಸುದ್ದಿಯಲ್ಲಿರುವ ಅನಂತ ಕುಮಾರ್ ಹೆಗಡೆ ಕುರಿತು ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಸಕ್ರಿಯ ರಾಜಕಾರಣದಿಂದ ಸಂಸದ ಹೆಗಡೆ, ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿದ್ದಾರಾ ಎನ್ನುವ ಮಾತುಗಳು ಇದೀಗ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ.
ದೀರ್ಘಕಾಲದ ವಿಶ್ರಾಂತಿಯಲ್ಲಿದ್ದಾರೆ ಸಂಸದ ಅನಂತ ಕುಮಾರ್ ಹೆಗಡೆ ಹೌದು.. ಒಂದು ಕಾಲದಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸಾಕಷ್ಟು ಪ್ರಸಿದ್ಧಿಯಾದವರು ಸಂಸದ ಅನಂತಕುಮಾರ ಹೆಗಡೆ. ಕಟ್ಟಾ ಹಿಂದುತ್ವವಾದಿಯಾಗಿ ಗುರುತಿಸಿಕೊಂಡಿರುವ ಅವರು, ತಮ್ಮ ಪ್ರಖರ ಮಾತುಗಳಿಂದಲೇ ಅತೀ ಹೆಚ್ಚು ಬೆಂಬಲಿಗರನ್ನು ಗಳಿಸಿಕೊಂಡಿದ್ದಾರೆ. ಇದುವರೆಗೆ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಗಡೆ, ಕಳೆದ ಅವಧಿಯಲ್ಲಿ ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅನಂತ ಕುಮಾರ್ ಹೆಗಡೆಗೆ ಬೆನ್ನುನೋವು, ಕಾಲುನೋವು!
ಕಳೆದ ಕೆಲ ವರ್ಷಗಳಿಂದ ತೀವ್ರ ಬೆನ್ನುನೋವು ಹಾಗೂ ಕಾಲುನೋವಿನಿಂದ ಬಳಲುತ್ತಿರುವ ಅನಂತ ಕುಮಾರ್ ಹೆಗಡೆ, ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದು, ವೈದ್ಯರು ದೀರ್ಘ ಕಾಲದ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದರಿಂದ ಪೂರ್ಣವಾಗಿ ಗುಣಮುಖರಾಗುವ ತನಕ ಅವರು, ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ. ಇದೇ ಕಾರಣದಿಂದಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಯ ನಂತರದಿಂದ ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಿದ್ದರು ಎಂದು ಕೂಡ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.
ಇನ್ನು, ಕೆಲ ದಿನಗಳ ಹಿಂದಷ್ಟೇ ಅವರಿಗೆ ಮತ್ತೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾಹಿತಿ ಹರಿದಾಡಿತ್ತು. ಆರ್‌ಎಸ್ಎಸ್‌ನ ಪ್ರಮುಖರು ಕೇಂದ್ರಕ್ಕೆ ಅನಂತ ಕುಮಾರ್ ಹೆಸರು ಶಿಫಾರಸ್ಸು ಮಾಡಿದ್ದರು. ಇವರಿಗೆ ಮತ್ತೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಬೆಂಬಲಿಗರಲ್ಲಿ ವ್ಯಕ್ತವಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧ ಎನ್ನುವಂತೆ ಅವರ ಆರೋಗ್ಯ ಹದಗೆಟ್ಟು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೆಚ್ಚು ಕಾಲ ವಿಶ್ರಾಂತಿಗೆ ಒಳಗಾಗಲಿದ್ದಾರೆ.
ರಾಜಕೀಯ ನಿವೃತ್ತಿಯಿಲ್ಲ ಎಂದ ಬಿಜೆಪಿ, ಹೆಗಡೆ ಮೌನ!
ಅನಂತ ಕುಮಾರ್ ಹೆಗಡೆ ಶಸ್ತ್ರಚಿಕಿತ್ಸೆಗೆ ಒಳಗಾದ ಹಿನ್ನೆಲೆ, ರಾಜಕೀಯ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾತುಗಳನ್ನ ಬಿಜೆಪಿ ಮುಖಂಡರು ತಿರಸ್ಕರಿಸಿದ್ದಾರೆ. ಫೈರ್ ಬ್ರ್ಯಾಂಡ್ ಸಂಸದರು ಎಲ್ಲಿಯೂ ರಾಜಕೀಯ ನಿವೃತ್ತಿ ಕುರಿತು ಹೇಳಿಕೊಂಡಿಲ್ಲ. ಆದಷ್ಟು ಬೇಗ ಅವರು ಗುಣಮುಖರಾಗಿ ರಾಜಕಾರಣಕ್ಕೆ ಮರಳುವ ವಿಶ್ವಾಸ ಇದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.
ಒಟ್ಟಾರೆ, ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಇದೀಗ ಅನಾರೋಗ್ಯದಿಂದಾಗಿ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಂಸದರೇ ಸ್ಪಷ್ಟನೆ ನೀಡಬೇಕಿದೆ.