ಕಾರವಾರ: ಮಹಾರಾಷ್ಟ್ರಕ್ಕೆ ತೆರಳಲು ಬಂದಿದ್ದ ತಾಯಿ-ಮಗಳು ಬಸ್ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿಯೇ ರಾತ್ರಿಯಿಡೀ ಕಳೆದಿದ್ದಾರೆ.
ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದ ತಾಯಿ-ಮಗಳು: ಕಾರವಾರದಲ್ಲಿ ಮನಕಲಕುವ ಘಟನೆ - Spent a whole night in Karwar Bus stop
ಮಹಾರಾಷ್ಟ್ರಕ್ಕೆ ತೆರಳಲು ಬಂದಿದ್ದ ತಾಯಿ-ಮಗಳು ಬಸ್ ಇಲ್ಲದ ಕಾರಣ ಕಾರವಾರದ ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದ ಘಟನೆ ನಡೆದಿದೆ. ರಾತ್ರಿಯಿಡೀ ಬಸ್ ನಿಲ್ದಾಣದಲ್ಲೇ ಕಾಲ ಕಳೆದು ಕಂಗಾಲಾದ ಇವರು ಕಣ್ಣೀರು ಹಾಕುತ್ತ ಕುಳಿತಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸಿರುವ ಪೊಲೀಸರು ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಕೊಡಗಿನ ವಿರಾಜಪೇಟೆಯಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳು ಲಾಕ್ಡೌನ್ನಿಂದಾಗಿ ಮನೆಗೆ ತೆರಳಲಾಗದೆ ಸಿಲುಕಿಕೊಂಡಿದ್ದರು. ಕೊನೆಗೆ ಸೇವಾ ಸಿಂಧು ಮೂಲಕ ಅಪ್ಲಿಕೇಶನ್ ಹಾಕಿಕೊಂಡು ಕೊಡಗಿನಿಂದ ಕಾರವಾರದವರೆಗೆ ಬಂದವರಿಗೆ ಮಹಾರಾಷ್ಟ್ರಕ್ಕೆ ತೆರಳಲು ಬಸ್ ಇರಲಿಲ್ಲ. ಇದರಿಂದ ತಾಯಿ-ಮಗಳು ಬದಲಿ ವ್ಯವಸ್ಥೆ ಇಲ್ಲದೆ ರಾತ್ರಿ ಪೂರ್ತಿ ಕಾರವಾರ ಬಸ್ ನಿಲ್ದಾಣದಲ್ಲಿಯೇ ಕಳೆದಿದ್ದಾರೆ.
ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರ ಠಾಣೆಯ ಪಿಎಸ್ಐ ಸಂತೋಷ್ ಕುಮಾರ್, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಜಕ್ಕಣ್ಣನವರ್ ತಿಂಡಿ, ನೀರು ಹಾಗೂ ಹಣ ನೀಡಿ ಬಳಿಕ ಮೆಡಿಕಲ್ ಟೆಸ್ಟ್ ಮಾಡಿಸಿ ಹೋಟೆಲ್ವೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಾಳೆ ಬೆಳಗ್ಗೆ ಕಾರವಾರದಿಂದ ಮಹಾರಾಷ್ಟ್ರಕ್ಕೆ ಕಳಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.