ಕಾರವಾರ: ದಲಿತ ಸಂಘರ್ಷ ಸಮಿತಿ ರಾಜ್ಯ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ನಲ್ಲಿ ನಡೆದಿದೆ. ಟಿಬೇಟಿಯನ್ ಕ್ಯಾಂಪ್ 1 ರಲ್ಲಿ ಎರಡು ದಿನಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಆದರೆ, ಇದೇ ವೇಳೆ ಹೆಜ್ಜೇನು ದಾಳಿ ಮಾಡಿದೆ. ಇನ್ನೂ ಘಟನೆಯಲ್ಲಿ ಗಾಯಗೊಂಡ ಜನರನ್ನು 108 ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾಜಿ ಶಾಸಕ ಸತೀಶ್ ಸೈಲ್ ವಿರುದ್ಧ ಪ್ರತಿಭಟನೆ:ಶಾಸಕಿ ರೂಪಾಲಿ ನಾಯ್ಕ ಅವರನ್ನು ಮಾಜಿ ಶಾಸಕ ಸತೀಶ್ ಸೈಲ್ ಅವಮಾನಿಸಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತೆಯರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಕ್ಕೆ ಕಳುಹಿಸಿದ ಘಟನೆ ನಡೆದಿದೆ.
ಮಾಜಿ ಶಾಸಕ ಸತೀಶ್ ಸೈಲ್ ಅವರು ಶಾಸಕಿ ರೂಪಾಲಿ ನಾಯ್ಕ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ, ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಮಹಿಳಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿ, ಸೈಲ್ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಡಿಸಿ ಕಚೇರಿ ಎದುರು ಘೋಷಣೆಗಳನ್ನು ಕೂಗುವಂತಿಲ್ಲ ಎಂದು ಕಾರ್ಯಕರ್ತೆಯರಿಗೆ ಸೂಚಿಸಿದರೂ ಘೋಷಣೆಗಳನ್ನ ಮುಂದುವರಿಸಿದ್ದರು. ಕೊನೆಗೆ ಪೊಲೀಸರು, ಘೋಷಣೆಗಳನ್ನು ಕೂಗುವುದಿದ್ದರೆ ಡಿಸಿ ಕಚೇರಿಯ ಹೊರಕ್ಕೆ ಹೋಗಿ ಎಂದು ಗೇಟಿನ ಹೊರಕ್ಕೆ ಕಳುಹಿಸಿದ್ದಾರೆ. ಬಳಿಕ ಗೇಟಿನ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.