ಕಾರವಾರ :ಕೊರೊನಾ ಮೊದಲನೇಯ ಅಲೆಯಲ್ಲಿ ರಾಜ್ಯದಲ್ಲೇ ಕೊರೊನಾ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದ್ದ ಜಿಲ್ಲೆ ಉತ್ತರಕನ್ನಡ. ಆದರೆ, ಎರಡನೇ ಅಲೆಯಲ್ಲಿ ಜಿಲ್ಲಾಡಳಿತದ ಸೂಕ್ತ ನಿರ್ವಹಣೆಯಿಂದಾಗಿ ಕೊರೊನಾ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಹೆಚ್ಚಳ ; ಕ್ರೀಡಾಕೂಟಕ್ಕೆ ಭಾರಿ ವಿರೋಧ ನಿತ್ಯ ಇನ್ನೂರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ಸದ್ಯ ಜಿಲ್ಲೆಯ ಸಕ್ರಿಯ ಸೋಂಕಿತರ ಸಂಖ್ಯೆ 1,719ಕ್ಕೆ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ 14 ಕಡೆಗಳಲ್ಲಿ ಕೋವಿಡ್ ಕ್ಲಸ್ಟರ್ ನಿರ್ಮಾಣವಾಗಿದೆ. ಕಾರವಾರದಲ್ಲಿ 2 ಹಾಗೂ ಹೊನ್ನಾವರದಲ್ಲಿ 3 ಕಡೆಗಳಲ್ಲಿ ಪತ್ತೆಯಾಗಿದೆ.
ಜಿಲ್ಲೆಯಲ್ಲಿ 18 ವರ್ಷದೊಳಗಿನ 349 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 13 ರಿಂದ 18 ವರ್ಷದೊಳಗಿನವರೇ 244 ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಕಾರವಾರ ಹಾಗೂ ಹೊನ್ನಾವರ ತಾಲೂಕುಗಳ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ನಗರ ಪ್ರದೇಶದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
'ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆ'
ಜಿಲ್ಲೆಯ ಕೊರೊನಾ ಪಾಸಿಟಿವಿಟಿ ದರ ಶೇ.8.89 ಇದೆ. ಕಾರವಾರ ತಾಲೂಕಿನಲ್ಲೇ ಅತಿ ಹೆಚ್ಚು ಅಂದ್ರೆ ಶೇ.14ರಷ್ಟಿದೆ. ಉಳಿದಂತೆ ಹೊನ್ನಾವರದಲ್ಲಿ ಶೇ.5.5 ಇದ್ರೆ, ಕುಮಟಾ ತಾಲೂಕಿನಲ್ಲಿ ಶೇ.5.3 ಪಾಸಿಟಿವಿಟಿ ದರ ಇದೆ. ಉಳಿದ ತಾಲೂಕುಗಳಲ್ಲಿ ಶೇ.5ಕ್ಕಿಂತ ಕಡಿಮೆಯಿದೆ. ವಿದ್ಯಾರ್ಥಿಗಳಿಗೆ ಕೊರೊನಾ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಶೇ.80ರಷ್ಟು ಲಸಿಕೆ ನೀಡಿಕೆ ಪೂರ್ಣವಾಗಿದೆ. ಹೀಗಾಗಿ, ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತ್ತಿದ್ದರೂ ಸಹ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಇಲ್ಲ ಅಂತಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೊರೊನಾ ಮಾರ್ಗಸೂಚಿ ಹಿನ್ನೆಲೆ ಜಿಲ್ಲೆಯಲ್ಲಿ ಜಾತ್ರೆಗಳಿಗೆ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ಆದ್ರೆ, ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಿರುವ ಕಾರವಾರದಲ್ಲೇ ಕ್ರೀಡಾಕೂಟ ನಡೆಯುತ್ತಿದೆ. ಸಾಕಷ್ಟು ವಿದ್ಯಾರ್ಥಿಗಳು ಸಮರ್ಪಕವಾಗಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವಿಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಆದರೂ ಸಹ ಅವರಿಗೆ ಯಾಕೆ ನಿರ್ಬಂಧವಿಲ್ಲ ಅಂತಾ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಸರ್ಕಾರದ ಧೋರಣೆಗೆ ಬೇಸತ್ತು ಸ್ವಂತ ಹಣದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡ ಗ್ರಾಮಸ್ಥರು