ಶಿರಸಿ (ಉತ್ತರ ಕನ್ನಡ) : ಒಂದೆಡೆ ತೀವ್ರ ಬರಗಾಲ, ಇನ್ನೊಂದೆಡೆ ರೈತರ ಬೆಳೆಗಳಿಗೆ ರೋಗ ಬಾಧೆ, ಹೀಗೆ ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿರುವ ಸಂದರ್ಭದಲ್ಲಿಯೇ ಈ ಹಿಂದೆ ರಾಜ್ಯ ಸರ್ಕಾರದಿಂದ ಮನ್ನಾ ಮಾಡಲಾಗಿದ್ದ ಬೆಳೆ ಸಾಲದ ಸೌಲಭ್ಯದಿಂದ ಉತ್ತರ ಕನ್ನಡ ಜಿಲ್ಲೆಯ 700ಕ್ಕೂ ಅಧಿಕ ರೈತರು ವಂಚಿತರಾಗಿದ್ದಾರೆ. ಮನ್ನಾ ಮಾಡಿ 6 ವರ್ಷಗಳೇ ಕಳೆದರೂ ಅನ್ನ ಕೊಡುವ ರೈತ ಸಹಕಾರಿ ಸಂಘಗಳಿಗೆ ಅಲೆಯುವ ದುಸ್ಥಿತಿ ಮುಂದುವರೆದಿದೆ.
ಉತ್ತರ ಕನ್ನಡ ಜಿಲ್ಲೆಯ ರೈತರು ಕೆಡಿಸಿಸಿ ಬ್ಯಾಂಕ್ ಅಡಿಯಲ್ಲಿ ಬೆಳೆ ಸಾಲ ಹೊಂದಿದ್ದು, ಅಲ್ಲಿಂದ ಸಿಗಬೇಕಾಗಿದ್ದ ಸಾಲ ಮನ್ನಾ ಸೌಲಭ್ಯವು ವಿವಿಧ ಕಾರಣದಿಂದ ದೊರಕದೇ ಇರುವ ಕಾರಣ ರೈತರು ಸಂಕಷ್ಟ ಪಡುವಂತಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಂತಹ ಸಂದರ್ಭದಲ್ಲಿ 2018 ರಲ್ಲಿ ಬೆಳೆ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. 1 ಲಕ್ಷ ರೂ.ವರೆಗೆ ಸಾಲ ಮನ್ನಾ ಸೌಲಭ್ಯ ನೀಡಲಾಗಿತ್ತು. ಆದರೆ, ಇದಾಗಿ ಮೂರು ವರ್ಷಗಳೇ ಕಳೆದರೂ ಸಹ 774 ರೈತರಿಗೆ ಸಾಲಮನ್ನಾ ಸೌಲಭ್ಯ ದೊರಕಿಲ್ಲ.
774 ರೈತರಿಗೆ ಒಟ್ಟು 5 ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಈ ಸಮಸ್ಯೆ ರಾಜ್ಯದಾದ್ಯಂತ ಇದ್ದು, ಆಧಾರ್ ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆ, ಪಹಣಿ ಪತ್ರಿಕೆಯಲ್ಲಿ ವ್ಯತ್ಯಾಸ ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳಿಂದ ರೈತರು ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಬೆಳೆ ಸಾಲವನ್ನು ಪ್ರಾಥಮಿಕ ಪತ್ತಿನ ಸಹಕಾರಿ ಸಂಘದಿಂದ ರೈತರು ಪಡೆದುಕೊಂಡಿದ್ದು, ಅಲ್ಲಿ ವಿಚಾರಿಸಿದಲ್ಲಿ ಯಾವುದೇ ಉತ್ತರ ಇಲ್ಲ. ಸೌಲಭ್ಯ ನೀಡದೇ ಹೋದಲ್ಲಿ ಮನ್ನಾ ಯಾಕೆ ಮಾಡಬೇಕು ? ಜೀವನ ಮಾಡುವುದೇ ಕಷ್ಟ ಎನ್ನುವಾಗ ಸರ್ಕಾರ ಹಿಂದಿನ ಮನ್ನಾ ಸೌಲಭ್ಯ ನೀಡಿ ರೈತರನ್ನು ಬದುಕಿಸಬೇಕು ಎನ್ನುವುದು ಕೃಷಿಕ ಗಣಪತಿ ಹೆಗಡೆ ಆಗ್ರಹಿಸಿದ್ದಾರೆ.