ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಾಗದಲ್ಲಿ ಬರುವ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕೆಂದು ಆಗ್ರಹಿಸಿ ಸಮುದಾಯದವರು ಕಳೆದ 12 ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ನಿರಂತರವಾಗಿ ಹೋರಾಟ ನಡೆಸಿದರು ಸರ್ಕಾರದಿಂದ ಸೂಕ್ತ ಸ್ಪಂದನೆ ಬಾರದ ಹಿನ್ನೆಲೆಯಲ್ಲಿ ಸಮುದಾಯದ ನಿರುದ್ಯೋಗಿ ಯುವಕರು ಪ್ರತಿಭಟನಾ ಸ್ಥಳದಲ್ಲಿ ಪಕೋಡಾ ಮಾರಾಟ ಮಾಡುತ್ತಿದ್ದಾರೆ.
ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬೇಕೆನ್ನುವ ಹೋರಾಟ ಹಿಂದಿನಿಂದ ನಡೆಯುತ್ತಿದೆ. ಮೊಗೇರ ಮೀನುಗಾರ ಸಮುದಾಯಕ್ಕೆ ಬರುತ್ತದೆ ಎಂದು ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವುದನ್ನು ನಿಲ್ಲಿಸಿ, ಪ್ರವರ್ಗ 1 ರ ಪ್ರಮಾಣ ಪತ್ರ ಕೊಡಲು ಮುಂದಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯ ಭಟ್ಕಳದಲ್ಲಿ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ ಕಳೆದ 14 ವರ್ಷದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಕೂಡಲೇ ಸರ್ಕಾರ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವ ಮೂಲಕ ಸಹಾಯಕ್ಕೆ ಮುಂದಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮೊಗೇರ ಜನಾಂಗವಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಮೊಗೇರ ಜನಾಂಗದವರು ಹೆಚ್ಚಾಗಿ ಮೀನುಗಾರಿಕೆಯನ್ನ ಮಾಡ್ತಿದ್ದಾರೆ. ಈ ಹಿಂದೆ ಸರ್ಕಾರ ಪರಿಶಿಷ್ಟರೆಂದು ಸೌಲಭ್ಯಗಳನ್ನು ನೀಡುತಿತ್ತು. ಆದ್ರೆ, ಈಗ ಮೀನುಗಾರಿಕೆ ಮಾಡುತ್ತಿದ್ದಾರೆಂಬ ಕಾರಣಕ್ಕೆ ಸೌಲಭ್ಯ ನಿಲ್ಲಿಸಲಾಗಿದೆ. ಹೀಗಾಗಿ, ಪದವಿ ಮುಗಿಸಿದ ಯುವಕರು ಅನಿವಾರ್ಯವಾಗಿ ಮೀನುಗಾರಿಕೆ, ಕೂಲಿ ನಾಲಿ ಮಾಡುತ್ತಿದ್ದಾರೆ.
ಕೆಲವರಿಗೆ ಸರ್ಕಾರಿ ಉದ್ಯೋಗ ಲಭಿಸಿದ್ರೂ ಕೂಡ ಸಿಂಧುತ್ವ ಪ್ರಮಾಣ ಪತ್ರ ಸಿಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹೈಕೋರ್ಟ್ ನಮ್ಮನ್ನ ಪರಿಶಿಷ್ಟರೆಂದು ಹೇಳಿದರೂ ಕೂಡ ಸರ್ಕಾರ ಪಟ್ಟಭದ್ರರ ಮಾತು ಕೇಳಿ ನಮ್ಮನ್ನ ತೊಂದರೆಗೆ ಸಿಲುಕಿದೆ. ಧರಣಿ ಕುಳಿತರೂ ಕೂಡ ನಾವು ಮೀನುಗಾರರು, ಮೇಲ್ವರ್ಗಕ್ಕೆ ಸೇರಿದವರು ಎಂದು ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನ ನೀಡುತ್ತಿದ್ದಾರೆ. ಹೀಗಾಗಿ ಬೇರೆ ದಾರಿಯಿಲ್ಲದೇ ನಾವು ಪ್ರತಿಭಟನೆಯನ್ನು ಮುಂದುವರಿಸಬೇಕಾಗಿದೆ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ.
ಪ್ರಕರಣ ಕುರಿತು ಮೊಗೇರ ಸಮುದಾಯದವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಸರ್ಕಾರ ಮಾತ್ರ ಈವರೆಗೆ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ. ವಿಧಾನಸಭೆಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ಸಮುದಾಯದ ಹೋರಾಟವನ್ನು ಪ್ರಸ್ತಾಪಿಸಿದ್ದು, ಸಚಿವ ಗೋವಿಂದ ಕಾರಜೋಳ ಮೊಗೇರ ಸಮುದಾಯದವರು ಪ್ರವರ್ಗ 1 ರಲ್ಲಿ ಬರುತ್ತಾರೆ ಎನ್ನುವ ಉತ್ತರ ನೀಡಿರುವುದರಿಂದ ಸಮುದಾಯದವರು ಹೋರಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಉಲ್ಕೆಯಲ್ಲ, ಉಪಗ್ರಹ..: ಸ್ಥಳಕ್ಕೆ ಧಾವಿಸಿ ಅವಶೇಷ ಸಂಗ್ರಹಿಸಿದ ತಜ್ಞರು