ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪತ್ತೆ ಹಾಗೂ ವೈದ್ಯಕೀಯ ತಪಾಸಣೆಗಾಗಿ ಮೊಬೈಲ್ ಟೀಮ್ಗಳನ್ನು ಸಿದ್ಧ ಮಾಡಿದ್ದು, ಪ್ರತಿ ತಾಲೂಕುಗಳ ಹಳ್ಳಿಗಳಿಗೆ ಈ ತಂಡ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದರು.
ಕೋವಿಡ್ ಸೋಂಕಿತರ ಪತ್ತೆಗೆ ಮೊಬೈಲ್ ಟೀಂ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರಬಹುದು. ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಿದೆ. ಸಾವು ಕೂಡ ಕ್ರಮೇಣ ಕಡಿಮೆ ಆಗುತ್ತಿದೆ. ಆದರೆ ಲಕ್ಷಣ ಇದ್ದವರು ವರದಿ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ಲಕ್ಷಣಗಳಿದ್ದರೆ ದಯಮಾಡಿ ಮುಚ್ಚಿಡಬೇಡಿ. ಕೋವಿಡ್ ಕೇರ್ ಸೆಂಟರ್ಗೆ ಕರೆದುಕೊಂಡು ಹೋಗುತ್ತಾರೆಂದು ಕೆಲವರು ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸ್ಯಾಂಪಲ್ಸ್ ಕಡಿಮೆ ಬರುತ್ತಿವೆ. ಇತರ ಕಾಯಿಲೆ ಇದ್ದವರನ್ನು ಮಾತ್ರ ಕೋವಿಡ್ ಕೇರ್ ಸೆಂಟರ್ಗೆ ಕರೆ ತರುತ್ತೇವೆ. ಅಲ್ಲಿ ರಕ್ತ ಪರೀಕ್ಷೆಗಳನ್ನ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೆ ಮಾಡಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಲಿದ್ದಾರೆ. ಅವರ ಬಳಿ ಆಗದಿದ್ದ ಪಕ್ಷದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸುತ್ತಾರೆ. ಈ ವೇಳೆ ತಪಾಸಣೆ ನಡೆಸಿ, ಮುಂದಿನ ಹಂತದ ಚಿಕಿತ್ಸೆಗೆ ಕ್ರಿಮ್ಸ್ ಫಿಜಿಶಿಯನ್ ಜೊತೆಗೆ ಟೆಲಿ ಕಾನ್ಫರೆನ್ಸ್ ಮೂಲಕ ಚಿಕಿತ್ಸೆ ನೀಡಲಿದ್ದಾರೆ. ಆಗಲೂ ತಾಲೂಕಿನಲ್ಲಿ ಚಿಕಿತ್ಸೆ ಸಾಧ್ಯವಾಗಿಲ್ಲವೆಂದರೆ ಮಾತ್ರ ಕ್ರಿಮ್ಸ್ಗೆ ರವಾನಿಸಲಿದ್ದಾರೆ ಎಂದರು.
ಇನ್ನು ಸರ್ಕಾರದಿಂದ ಸೆಂಟ್ರಲೈಸ್ಡ್ ಬೆಡ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಮಾಡಲಾಗಿದೆ. ಬಯೋಮೆಟ್ರಿಕ್ನಿಂದ ಬೆಡ್ ಅಲಾಟ್ಮೆಂಟ್ ಆಗುತ್ತದೆ. ಪ್ರತೀ ರೋಗಿಯ ದಾಖಲು, ಡಿಸ್ಚಾರ್ಜ್ ಹಾಗೂ ರೆಫರ್ನ ಬಗ್ಗೆ ಇಲ್ಲಿ ದಾಖಲಾಗಲಿದೆ ಎಂದ ಅವರು, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಸ್ಥಳೀಯ ಕ್ಲಿನಿಕ್ಗಳ ವೈದ್ಯರನ್ನು ಭೇಟಿ ನೀಡಿ ಔಷಧಿಗಳನ್ನು ಪಡೆದು ಮನೆಯಲ್ಲಿರುತ್ತಿದ್ದಾರೆ. ಕೊನೆಯ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಹೋದಾಗ ಮಾಹಿತಿಯನ್ನೇ ಕೊಡುತ್ತಿಲ್ಲ ಎಂಬ ದೂರುಗಳಿವೆ. ತುಂಬಾ ಲೇಟಾಗಿ ಬರುವವರದ್ದೇ ನಮಗೆ ಬದುಕುಳಿಸಲು ಸಮಸ್ಯೆಯಾಗಿದೆ ಎಂದರು. ಲಾಕ್ ಡೌನ್ ಮೊದಲ ದಿನ ಪರಿಣಾಮಕಾರಿಯಾಗಿದೆ. ಜನ ಕೂಡ ಸಹಕಾರ ನೀಡಿದ್ದಾರೆ. ಇದೇ ಸಹಕಾರ ಮುಂದುವರಿಸುವಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಶಾಕಿಂಗ್ ನ್ಯೂಸ್!: ಕೊರೊನಾ ಸೋಂಕಿತರಲ್ಲದಿದ್ದರೂ 40 ಮಂದಿಗೆ ಬ್ಲ್ಯಾಕ್ ಫಂಗಸ್ ದೃಢ!